

Bihar Election : ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿರುವ ಕೇಂದ್ರ ಚುನಾವಣಾ ಆಯೋಗ, ಇದನ್ನು ವಿರೋಧಿಸುವವರನ್ನು ಸಮಾಧಾನಪಡಿಸಲು ನಾವು ಸಂವಿಧಾನದ ವಿರುದ್ಧ ಹೋಗಬೇಕೆ ಎಂದು ಪ್ರಶ್ನಿಸಿದೆ.
ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆಗಳು ಮುಂದುವರೆದಿರುವ ನಡುವೆ ಚುನಾವಣಾ ಆಯೋಗವು ಗುರುವಾರ (ಜುಲೈ 24) ಸ್ಪಷ್ಟನೆ ನೀಡಿದ್ದು, ವಿಶೇಷ ತೀವ್ರ ಪರಿಷ್ಕರಣೆ (SIR) ಯ ಭಾಗವಾಗಿ ಕೈಗೊಳ್ಳಲಾದ ಈ ಕಾರ್ಯಚರಣೆಯು ಮುಕ್ತ, ನ್ಯಾಯಯುತ ಚುನಾವಣೆಗಳು ಮತ್ತು ಬಲವಾದ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಪ್ರತಿಪಾದಿಸಿದೆ.
ಇದನ್ನೂ ಓದಿ:ಸರ್ಕಾರಿ ಸೌಲಭ್ಯ ವಿತರಣೆಗೆ ಕ್ರಮ ವಹಿಸಿ
ಚುನಾವಣಾ ಆಯೋಗ ಈ ಕ್ರಮ ಕೈಗೊಳ್ಳದಿದ್ದರೆ ಅಕ್ರಮ ವಲಸಿಗರು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿರುವವರಿಗೆ ಮತ್ತು ವಿದೇಶಿ ಮತದಾರರಿಗೆ ಅಕ್ರಮ ಮತದಾನ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಸಂವಿಧಾನ ವಿರೋಧಿ ನಡೆ ಅಲ್ಲವೇ ಎಂದು ಪ್ರಶ್ನಿಸಿತು. ಸಂದರ್ಭ ಬಂದಾಗ ಭಾರತದ ಎಲ್ಲಾ ನಾಗರಿಕರು ಒಟ್ಟಾಗಿ ರಾಜಕೀಯ ಸಿದ್ಧಾಂತಗಳನ್ನು ಮೀರಿ ಇಂತಹ ವಿಷಯದ ಬಗ್ಗೆ ಆಳವಾಗಿ ಚಿಂತಿಸಬೇಕು ಎಂದಿದೆ.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ದೇಶ್ಯಾದ್ಯಂತ ವಿವಾದವನ್ನು ಹುಟ್ಟುಹಾಕಿದ್ದು, ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ದೊಡ್ಡ ಪ್ರಮಾಣದಲ್ಲಿ ಮತದಾರರನ್ನು ತೆಗೆದು ಹಾಕುವುದು ಮತ್ತು ಹೊಸ ಮತದಾರರ ಮತದಾನದ ಹಕ್ಕು ನಿರಾಕರಿಸುವ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಅನರ್ಹ ವ್ಯಕ್ತಿಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ ಎಂದು ಹೇಳಿದರೆ, ವಿಪಕ್ಷಗಳು ಅಲ್ಪಸಂಖ್ಯಾತ ಸಮುದಾಯಗಳನ್ನು ಹೊರಗಿಡಲು ಬಿಜೆಪಿಯ "ಪಿತೂರಿ" ಎಂದು ಕರೆಯುತ್ತಿವೆ.
ಸದ್ಯ ಮಂಗಳವಾರದವರೆಗಿನ ಕಾರ್ಯಾಚರಣೆಯಲ್ಲಿ ಆಯೋಗವು ಸುಮಾರು 52 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದು, ಅದರಲ್ಲಿ 18 ಲಕ್ಷ ಮತದಾರರು ಸಾವಿಗೀಡಾಗಿದ್ದಾರೆ, 26 ಲಕ್ಷ ಜನರು ಇತರ ಕ್ಷೇತ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ ಮತ್ತು 7 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕ್ರಿಯೆಯು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸವಾಲನ್ನು ಎದುರಿಸಿದ್ದು, ಪರಿಷ್ಕರಣೆ ಮುಂದುವರಿಸಲು ಅವಕಾಶ ನೀಡುವುದರ ಜೊತೆಗೆ ಆಯೋಗದ ನಿರ್ಧಾರದ ಸಮಯವನ್ನು ಪ್ರಶ್ನಿಸಿದೆ. ಅಸ್ತಿತ್ವದಲ್ಲಿರುವ ಪಟ್ಟಿಯ ಜೊತೆಗೆ ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಅಧಿಕೃತ ಗುರುತಿನ ದಾಖಲೆಗಳಾಗಿ ಪರಿಗಣಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. (ಏಜೆನ್ಸೀಸ್)