

ಬಿಹಾರ: ರಾಮಾಯಣವನ್ನು ಆಧರಿಸಿದ ಹಿಂದೂ ಧಾರ್ಮಿಕ ಪುಸ್ತಕವಾದ ರಾಮಚರಿತಮಾನಸವನ್ನು ಪೊಟ್ಯಾಸಿಯಮ್ ಸೈನೈಡ್ಗೆ ಹೋಲಿಸಿದ ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್, ಇದೀಗ ಮತ್ತೊಮ್ಮೆ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ.
ಹಿಂದಿ ದಿವಸ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಚಂದ್ರಶೇಖರ್, "ಐವತ್ತೈದು ರೀತಿಯ ಭಕ್ಷ್ಯಗಳನ್ನು ಬಡಿಸಿ, ಅದರಲ್ಲಿ ಪೊಟ್ಯಾಸಿಯಮ್ ಸೈನೈಡ್ ಬೆರೆಸಿದರೆ, ನೀವು ಅದನ್ನು ತಿನ್ನುತ್ತೀರಾ? ಹಿಂದೂ ಧರ್ಮದ ಧರ್ಮಗ್ರಂಥಗಳ ವಿಷಯವೂ ಅದೇ" ಎಂದು ಚಂದ್ರಶೇಖರ್ ಹೇಳಿದ್ದಾರೆ.
ಬಾಬಾ ನಾಗಾರ್ಜುನ್ ಮತ್ತು ಲೋಹಿಯಾ ಸೇರಿದಂತೆ ಅನೇಕ ಲೇಖಕರು ಕೂಡ ಇದನ್ನು ಟೀಕಿಸಿದ್ದಾರೆ ಎಂದು ಹೇಳಿದ ಸಚಿವರು,“ರಾಮಚರಿತಮಾನಸಕ್ಕೆ ನನ್ನ ಆಕ್ಷೇಪ ದೃಢವಾಗಿದೆ ಮತ್ತು ಅದು ನನ್ನ ಜೀವನದುದ್ದಕ್ಕೂ ಇರಲಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ" ಎಂದು ಹೇಳಿದರು.
ಸಚಿವ ಚಂದ್ರಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದೆ. ಈ ವಿವಾದ ಕುರಿತು ಮಾತನಾಡಿದ ಬಿಜೆಪಿ ವಕ್ತಾರ ನೀರಜ್ ಕುಮಾರ್, "ರಾಮಚರಿತ ಮಾನಸ ಬಗ್ಗೆ ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಪ್ರಶ್ನಿಸುತ್ತಿಲ್ಲವೇ? ಸಿಎಂ ಸನಾತನವನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಏನಾದರೂ ಸಮಸ್ಯೆಯಿದ್ದರೆ ತಮ್ಮ ಧರ್ಮವನ್ನು ಮತಾಂತರಗೊಳಿಸಬೇಕು" ಎಂದು ಹೇಳಿದರು,(ಏಜೆನ್ಸೀಸ್).