

ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಶುರುವಾದ ಬಳಿಕ, ಬಾಲಿವುಡ್ ಮಂದಿಗೆ ದಕ್ಷಿಣ ಭಾರತದ ಚಿತ್ರರಂಗದ ಜೊತೆ ಸ್ನೇಹ ಹೆಚ್ಚಾಗಿದೆ. ಟಾಲಿವುಡ್ನ ಖ್ಯಾತ ನಟ ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಜವಾನ್’ ಸಿನಿಮಾದಲ್ಲಿ ನಟಿಸಿದ ಪ್ರಮುಖ ಕಲಾವಿದರೆಲ್ಲರಿಗೂ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶಕ ಅಟ್ಲಿ ಬಗ್ಗೆ ಅಲ್ಲು ಅರ್ಜುನ್ ಅವರು ಹೆಮ್ಮೆಯ ಮಾತುಗಳನ್ನು ಪೋಸ್ಟ್ ಮಾಡಿದ್ದಾರೆ. ಬಿಡುಗಡೆಯಾಗಿ 7 ದಿನ ಕಳೆದಿದ್ದರೂ ಕೂಡ ‘ಜವಾನ್’ ಸಿನಿಮಾ ಅಬ್ಬರಿಸುತ್ತಿದೆ.
'ಈ ದೊಡ್ಡ ಯಶಸ್ಸಿಗಾಗಿ ಜವಾನ್ ಸಿನಿಮಾದ ಇಡೀ ತಂಡಕ್ಕೆ ಅಭಿನಂದನೆಗಳು. ಶಾರುಖ್ ಖಾನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆ ಈ ಗೆಲುವು ಸಿಗಲಿ ಎಂದು ನಾವೆಲ್ಲ ಪ್ರಾರ್ಥಿಸಿದ್ದೆವು. ಎಂದಿನಂತೆ ವಿಜಯ್ ಸೇತುಪತಿ ಅವರು ಭಯಂಕರವಾಗಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಕೂಡ ನಿರಾಯಾಸವಾಗಿ ಅಭಿನಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಯನತಾರಾ ಅವರು ಮಿಂಚುತ್ತಿದ್ದಾರೆ. ಹಾಡುಗಳನ್ನು ಪದೇ ಪದೇ ಕೇಳುವಂತೆ ಮಾಡಿದ್ದಾರೆ ಅನಿರುದ್ಧ್ ರವಿಚಂದರ್. ನಮಗೆಲ್ಲ ನಿರ್ದೇಶಕ ಅಟ್ಲಿ ಅವರು ಹೆಮ್ಮೆ ತಂದಿದ್ದಾರೆ. ಆಲೋಚನೆಗೆ ಪ್ರೇರೇಪಿಸುವಂತಹ ಕಮರ್ಷಿಯಲ್ ಸಿನಿಮಾ ಮಾಡಿ, ಭಾರತದ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ನಿರ್ಮಿಸಿದ್ದಕ್ಕೆ ಅಟ್ಲಿ ಅವರಿಗೆ ದೊಡ್ಡ ಅಭಿನಂದನೆಗಳು’ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.
ತಮಿಳಿನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದಕ್ಷಿಣ ಭಾರತದ ಅನೇಕ ಸ್ಟಾರ್ ನಟರು ‘ಜವಾನ್’ ಸಿನಿಮಾದ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ.