ಸುಪ್ರೀಂ ಕೋರ್ಟ್‌ನಿಂದ ವಕ್ಫ್ ತಿದ್ದುಪಡಿ ಕಾಯ್ದೆಗೆ ತಾತ್ಕಾಲಿಕ ಬ್ರೇಕ್: ಕೆಲ ವಿವಾದಾಸ್ಪದ ನಿಯಮಗಳಿಗೆ ತಡೆ! Waqf Amendment Act

Waqf Amendment Act
Published on

Waqf Amendment Act : ವಕ್ಫ್ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಸುಪ್ರೀಂಕೋರ್ಟ್​ ಇಂದು (ಸೆ.15) ಮಧ್ಯಂತರ ಪರಿಹಾರವನ್ನು ಒದಗಿಸಿದೆ. ಕೇಂದ್ರ ಸರ್ಕಾರ ಪರಿಚಯಿಸಿರುವ ಈ ಕಾಯ್ದೆಯ ಕೆಲವು ವಿಭಾಗಗಳು ಅಥವಾ ನಿಯಮಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠವು, ಕಾಯ್ದೆಯ ಸೆಕ್ಷನ್ 3(r) ಅಡಿಯ "5 ವರ್ಷಗಳ ಪ್ರಾಕ್ಟಿಸಿಂಗ್ ಮುಸ್ಲಿಂ" ಎಂಬ ನಿಯಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ನಿಯಮವನ್ನು "ತರ್ಕಹೀನ" ಎಂದು ಗುರುತಿಸಿ, "ಪ್ರಾಕ್ಟಿಸಿಂಗ್ ಮುಸ್ಲಿಂ" ಎಂಬುದಕ್ಕೆ ಸ್ಪಷ್ಟ ಪರೀಕ್ಷೆ ಇಲ್ಲ ಎಂದು ಟೀಕಿಸಿದೆ.

ಇದರ ಜೊತೆಗೆ, ವಕ್ಫ್ ಬೈ ಯೂಸರ್ ರದ್ದುಗೊಳಿಸುವ ನಿಯಮವನ್ನು ಸಹ ತಡೆಹಿಡಿಯಲಾಗಿದೆ. ದೀರ್ಘಕಾಲೀನ ಧಾರ್ಮಿಕ ಆಸ್ತಿಗಳ ಸಂರಕ್ಷಣೆಗೆ ಸುಪ್ರೀಂಕೋರ್ಟ್​ ಒತ್ತು ನೀಡಿದೆ. ಅಲ್ಲದೆ, ಈ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳು ಇತ್ಯರ್ಥವಾಗುವವರೆಗೆ ಈ ನಿಬಂಧನೆಗಳಿಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಕೊರ್ಟ್​ ಹೇಳಿದೆ.

ಹೊಸ ಕಾಯ್ದೆಯಲ್ಲಿ ಜಿಲ್ಲಾಧಿಕಾರಿಗೆ ನೀಡಲಾದ ವ್ಯಾಪಕ ಅಧಿಕಾರಗಳಿಗೆ ತಡೆ ನೀಡಿರುವ ನ್ಯಾಯಾಲಯ, ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಜಿಲ್ಲಾಧಿಕಾರಿಗೆ ಅನುಮತಿ ನೀಡಲಾಗುವುದಿಲ್ಲ ಮತ್ತು ಇದು ಅಧಿಕಾರಗಳ ಪ್ರತ್ಯೇಕತೆಯನ್ನು ಉಲ್ಲಂಘಿಸುತ್ತದೆ. ನ್ಯಾಯಮಂಡಳಿಯಿಂದ ತೀರ್ಪು ಬರುವವರೆಗೆ, ಯಾವುದೇ ಪಕ್ಷದ ವಿರುದ್ಧ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸಲಾಗುವುದಿಲ್ಲ. ಜಿಲ್ಲಾಧಿಕಾರಿಗೆ ಅಂತಹ ಅಧಿಕಾರಗಳೊಂದಿಗೆ ವ್ಯವಹರಿಸುವ ನಿಬಂಧನೆಯನ್ನು ತಡೆಹಿಡಿಯಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಹೊಸ ಕಾಯ್ದೆಯು ವಕ್ಫ್ ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಿಲ್ಲಾಧಿಕಾರಿಗೆ ಅಂತಿಮ ಮಧ್ಯಸ್ಥಗಾರನ ಅಧಿಕಾರ ನೀಡಿತ್ತು. ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ ಆಸ್ತಿ ಸಂಪೂರ್ಣವಾಗಿ ಅಥವಾ ಭಾಗಶಃ ವಿವಾದದಲ್ಲಿದೆ ಅಥವಾ ಸರ್ಕಾರಿ ಆಸ್ತಿಯಾಗಿದೆ ಎಂದು ಉಲ್ಲೇಖಿಸಿದರೆ, ವಿವಾದವನ್ನು ಸಮರ್ಥ ನ್ಯಾಯಾಲಯ ನಿರ್ಧರಿಸದ ಹೊರತು ಅದನ್ನು ವಕ್ಫ್​ ಆಸ್ತಿ ಎಂದು ನೋಂದಾಯಿಸಲಾಗುವುದಿಲ್ಲ ಎಂದು ಹೊಸ ಕಾನೂನು ಹೇಳುತ್ತದೆ. ಇದನ್ನು ಪ್ರಶ್ನೆ ಮಾಡಿದ್ದ ಮುಸ್ಲಿಂ ಸಂಸ್ಥೆಗಳು, ಈ ನಿಬಂಧನೆಯನ್ನು ಎತ್ತಿ ತೋರಿಸಿದ್ದವು ಮತ್ತು ಇದು ವಕ್ಫ್ ಆಸ್ತಿಗಳ ಮೇಲಿನ ಕಾನೂನುಬಾಹಿರ ಹಕ್ಕುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಾತ್ಕಾಲಿಕವಾಗಿ ತಡೆ ನೀಡಿದೆ.

ಇನ್ನು ವಕ್ಫ್ ಮಂಡಳಿಯಲ್ಲಿ ಮೂರಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಸೇರಿಸಿಕೊಳ್ಳಬಾರದು ಮತ್ತು ಕೇಂದ್ರ ವಕ್ಫ್ ಮಂಡಳಿಯಲ್ಲಿ ನಾಲ್ವರಿಗಿಂತ ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳಬಾರದು ಎಂದು ಪೀಠವು ಇದೇ ಸಂದರ್ಭದಲ್ಲಿ ಹೇಳಿದೆ.

ಅರ್ಜಿದಾರರಾದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸೇರಿದಂತೆ ಹಲವರು ಈ ತೀರ್ಪನ್ನು ಸ್ವಾಗತಿಸಿದ್ದು, ವಕ್ಫ್ ಆಸ್ತಿಗಳ ರಕ್ಷಣೆಗೆ ಇದು ಗೆಲುವು ಎಂದು ಪರಿಗಣಿಸಿದ್ದಾರೆ. ಈ ಕಾಯ್ದೆಯ ಸಂವಿಧಾನಿಕ ಸಿಂಧುತ್ವದ ಬಗ್ಗೆ ಸಂಪೂರ್ಣ ವಿಚಾರಣೆ ಭವಿಷ್ಯದಲ್ಲಿ ನಡೆಯಲಿದ್ದು, ಇಂದಿನ ಆದೇಶವು ತಾತ್ಕಾಲಿಕವಾಗಿದೆ. ಕೇಂದ್ರ ಸರ್ಕಾರವು ಕಾಯ್ದೆಯನ್ನು "ವಕ್ಫ್ ಆಸ್ತಿಗಳ ದುರ್ಬಳಕೆ ತಡೆಗಟ್ಟುವ" ಉದ್ದೇಶದಿಂದ ರಕ್ಷಿಸಿದರೆ, ಪ್ರತಿವಾದಿಗಳು ಇದು "ಮುಸ್ಲಿಂ ಧಾರ್ಮಿಕ ಹಕ್ಕುಗಳಿಗೆ ಧಕ್ಕೆ" ಎಂದು ವಾದಿಸಿದ್ದಾರೆ.

ಅಂದಹಾಗೆ, ವಕ್ಫ್ (ತಿದ್ದುಪಡಿ) ಕಾಯ್ದೆ 2025 ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ, ಸಂರಕ್ಷಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿಯಾಗಿದೆ. ಈ ಕಾಯ್ದೆಯನ್ನು ಕೇಂದ್ರ ಸರ್ಕಾರವು 2025, ಏಪ್ರಿಲ್ 4ರಂದು ಸಂಸತ್ತಿನಲ್ಲಿ ಅಂಗೀಕರಿಸಿತು ಮತ್ತು 2025, ಏಪ್ರಿಲ್ 8ರಂದು ಜಾರಿಗೆ ತಂದಿತು. ಇದರ ಮುಖ್ಯ ಉದ್ದೇಶವು ವಕ್ಫ್ ಆಸ್ತಿಗಳ ದುರ್ಬಳಕೆಯನ್ನು ತಡೆಗಟ್ಟುವುದು, ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ವಕ್ಫ್ ಬೋರ್ಡ್‌ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದಾಗಿದೆ. ಆದರೆ, ಈ ಕಾಯ್ದೆಯ ಕೆಲವು ವಿಧಿಗಳು ವಿವಾದಕ್ಕೆ ಕಾರಣವಾಗಿವೆ, ವಿಶೇಷವಾಗಿ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳು ಮತ್ತು ಆಸ್ತಿ ಸ್ವಾಯತ್ತತೆಗೆ ಸಂಬಂಧಿಸಿದಂತೆ. ಹೀಗಾಗಿ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net