ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡದಿರಲು ಇದೇ ಪ್ರಮುಖ ಕಾರಣ? : ಆಟಗಾರರ ಮೇಲೆ ಬಿಸಿಸಿಐ ನಿಗಾ

New-Project-1-1-1
Published on

ಬೆಂಗಳೂರು: ಮುಂಬರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಬಿಸಿಸಿಐ ಕೊನೆಗೂ ಗುರುವಾರ ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಟಿ20 ತಂಡದ ನೂತನ ನಾಯಕನಾಗಿ ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದ ರೋಹಿತ್ ಶರ್ಮ ಏಕದಿನ ಸರಣಿಗೆ ಮರಳಲಿದ್ದು, ನಾಯಕನಾಗಿ ಮುಂದುವರಿಯಲಿದ್ದಾರೆ. ಏಕದಿನ ಹಾಗೂ ಟಿ20 ತಂಡಕ್ಕೆ ಯುವ ಬ್ಯಾಟರ್ ಶುಭಮಾನ್ ಗಿಲ್ ಅವರನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ.

ಇದರೊಂದಿಗೆ ರೋಹಿತ್ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಸ್ಥಾನವೂ ಕೈತಪ್ಪಿದೆ. ಈ ಮೂಲಕ ಗೌತಮ್ ಗಂಭೀರ್ ಟೀಮ್ ಇಂಡಿಯಾ ನೂತನ ಕೋಚ್ ಆಗಿ ನೇಮಕಗೊಂಡ ನಂತರ ಮೊದಲ ದ್ವಿಪಕ್ಷೀಯ ಸರಣಿಯಿಂದಲೇ 2026ರ ಟಿ20 ವಿಶ್ವಕಪ್ ಹಾಗೂ 2027ರ ಏಕದಿನ ವಿಶ್ವಕಪ್ ಟೂರ್ನಿಗಳಿಗೆ ಬಲಿಷ್ಠ ತಂಡ ಕಟ್ಟಲು ಸಿದ್ಧತೆ ಆರಂಭಿಸಿದ್ದಾರೆ.

ಕೋಚ್ ಗಂಭೀರ್ ಮನವಿಯನ್ನು ಒಪ್ಪಿಕೊಂಡಿರುವ ಏಕದಿನ ಹಾಗೂ ಟೆಸ್ಟ್ ನಾಯಕ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಬಳಿಕ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. 2023ರ ಏಕದಿನ ವಿಶ್ವಕಪ್ ಬಳಿಕ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯದೆ ವಾರ್ಷಿಕ ಗುತ್ತಿಗೆಯಿಂದ ವಂಚಿತವಾಗಿದ್ದ ಶ್ರೇಯಸ್ ಅಯ್ಯರ್ ಹಾಗೂ ಕಳೆದ ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಾಯಕನಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ಆದರೆ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಏಕದಿನ ಹಾಗೂ ಕುಲದೀಪ್ ಯಾದವ್-ಯಜುವೇಂದ್ರ ಚಾಹಲ್ ಜೋಡಿಯನ್ನು ಟಿ20 ತಂಡದಿಂದ ಕೈಬಿಡಲಾಗಿದ್ದು, ಇದು ಕಾರ್ಯದೊತ್ತಡ ನೀಡಲಾಗಿರುವ ತಗ್ಗಿಸಲು ವಿಶ್ರಾಂತಿಯೇ ಎಂಬುದು ಸ್ಪಪ್ಟಪಡಿಸಿಲ್ಲ. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್ ಇಂಡಿಯಾ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದ್ದು, ಅನುಭವಿ ಆಟಗಾರರನ್ನು ಕೈ ಬಿಟ್ಟಿರುವುದು ಅಚ್ಚರಿ ಮೂಡಿಸಿದೆ. ಜಿಂಬಾಬ್ವೆ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮ ಸ್ಥಾನ ಉಳಿಸಿಕೊಳ್ಳಲು ವಿಲರಾಗಿದ್ದು, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಏಕದಿನ ತಂಡದಿಂದ ಹೊರಗುಳಿದಿದ್ದಾರೆ.

ಕಾರ್ಯದೊತ್ತಡ ತಗ್ಗಿಸಲು ಪಾಂಡ್ಯಗೆ ನಾಯಕತ್ವವಿಲ್ಲ? ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಗಿ ಭಾರತಕ್ಕೆ ನಿರ್ಣಾಯಕ ಆಟಗಾರರಾಗಿದ್ದಾರೆ. ಇದೇ ವೇಳೆ ಅವರ ಫಿಟ್ನೆಸ್ ಪ್ರಮುಖ ಪಾತ್ರವಹಿಸಲಿದ್ದು, ಅವರ ಕಾರ್ಯದೊತ್ತಡ ತಗ್ಗಿಸುವ ನಿಟ್ಟಿನಲ್ಲೂ ಗಮನ ನೀಡಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಅವರಿಗೆ ನಾಯಕತ್ವದ ಹೆಚ್ಚುವರಿ ಹೊಣೆಯನ್ನು ನೀಡದಿರಲು ಗಂಭೀರ್-ಅಗರ್ಕರ್ ಬಯಸಿದ್ದಾರೆ ಎನ್ನಲಾಗಿದೆ. ಪಾಂಡ್ಯ ತಂಡದ ನಾಯಕರಾಗಿದ್ದರೆ, ಕಾರ್ಯದೊತ್ತಡ ತಗ್ಗಿಸಲು ಸರಣಿ ಅಥವಾ ಟೂರ್ನಿಯ ನಡುವೆ ವಿಶ್ರಾಂತಿ ನೀಡಲು ಕಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ಸೂರ್ಯಕುಮಾರ್‌ಗೆ ಹೊಣೆ ನೀಡಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net