

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ಯುಐ ಸಿನಿಮಾದ ಮುಂದಿನ ಅಪ್ಡೇಟ್ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದ ಅಭಿಮಾನಿಳಿಗೆ ಕೊನೆಗೂ ಚಿತ್ರತಂಡ ಗುಡ್ ನ್ಯೂಸ್ ನೀಡಿದೆ. ಇದೇ 16ನೇ ತಾರೀಖಿನಂದು ದೊಡ್ಡ ಘೋಷಣೆ ಮಾಡುವುದಾಗಿ ಚಿತ್ರತಂಡ ಹೊಸ ಅಪ್ಡೇಟ್ ಮೂಲಕ ತಿಳಿಸಿದೆ.
ಯುಐ ಸಿನಿಮಾದಿಂದ ಕೊನೆಯದಾಗಿ ಟ್ರೋಲ್ ಸಾಂಗ್ ಬಿಡುಗಡೆಯಾಗಿತ್ತು. ಐದು ತಿಂಗಳ ಹಿಂದೆ ಈ ಸಾಂಗ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ಚಿತ್ರದ ಮೇಲಿನ ನಿರೀಕ್ಷೆಯನ್ನು ಸಹ ದುಪ್ಪಟ್ಟು ಮಾಡಿತ್ತು. ಇದಾದ ಬಳಿಕ ಚಿತ್ರತಂಡದಿಂದ ಯಾವುದೇ ಅಪ್ಡೇಟ್ ಬಂದಿರಲಿಲ್ಲ. ಯಾವಾಗ ಹೊಸ ಅಪ್ಡೇಟ್ ಬರುತ್ತದೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದರು ಮತ್ತು ಚಿತ್ರತಂಡವನ್ನು ಕೇಳುತ್ತಿದ್ದರು. ಇದೀಗ ಕೊನೆಗೂ ಹೊಸ ಅಪ್ಡೇಟ್ ಅನ್ನು ಯುಐ ಸಿನಿಮಾ ತಂಡ ಘೋಷಣೆ ಮಾಡಿದೆ.
ಇದೀಗ ವಿಡಿಯೋವೊಂದರ ಮೂಲಕ ಇದೇ 16ನೇ ತಾರೀಖಿನಂದು ಬಿಗ್ ಅನೌನ್ಸ್ಮೆಂಟ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಇದರ ಬೆನ್ನಲ್ಲೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದ್ದು, ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಆ ಬಿಗ್ ಅಪ್ಡೇಟ್ ಏನು ಎಂಬುದನ್ನು ತಿಳಿಯಲು ಆಗಸ್ಟ್ 16ರವರೆಗೆ ಕಾಯಲೇಬೇಕಿದೆ.
ಅಂದಹಾಗೆ ಯುಐ ಚಿತ್ರದಲ್ಲಿ ಉಪೇಂದ್ರಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸಿದ್ದಾರೆ.