ಟೌನ್‌ಶಿಪ್‌ಗಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳದಂತೆ ಭೂತಾಯಿ ಹೋರಾಟ ಸಮಿತಿ ಪ್ರತಿಭಟನೆ

14
Published on

ಮೈಸೂರು: ಕೈಗಾರಿಕೆ ಹಾಗೂ ಟೌನ್‌ಶಿಪ್‌ಗಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳದಂತೆ ಒತ್ತಾಯಿಸಿ ಭೂತಾಯಿ ಹೋರಾಟ ಸಮಿತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಕೆಆರ್‌ಎಸ್ ರಸ್ತೆಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿ ಮುಂದೆ ಧರಣಿ ನಡೆಸಿದ ಪ್ರತಿಭಟನಾಕಾರರು ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ ಬೀಚನಕುಪ್ಪೆ ಗ್ರಾಮದ ಜಮೀನು ಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿದರು.

ಬೀಚನಕುಪ್ಪೆ ಗ್ರಾಮದಲ್ಲಿ ಸುಮಾರು 48 ಎಕರೆ ರೈತರ ಕೃಷಿ ಭೂಮಿ ಹಾಗೂ 60 ರಿಂದ 70 ಎಕರೆ ಗೋಮಾಳ, ಸರ್ಕಾರಿ ಜಮೀನನ್ನು ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಆದರೆ ರೈತರು ಇಲ್ಲಿ ಕೃಷಿ ಮಾಡಿಕೊಂಡಿದ್ದು, ಆಧಾರವಾಗಿರುವ ಕೃಷಿ ಭೂಮಿಯನ್ನು ಕಳೆದುಕೊಂಡರೆ ಜೀವನ ನಡೆಸಲು ಕಷ್ಟವಾಗುತ್ತದೆ ಎಂದು ದೂರಿದರು.

ಅಲ್ಲದೆ ಚೇತನ್ ಪಿ.ತಯಾಲ್ ಬರ್ಗರಿನ್ ಪ್ರಾಪರ್ಟಿಸ್ ಲಿಮಿಟೆಡ್‌ನವರು ಟೌನ್‌ಶಿಪ್ ನಿರ್ಮಿಸಲು ಸುಮಾರು 234 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಅರ್ಜಿ ಸಲ್ಲಿಸಿದೆ. ಆದರೆ ಇದನ್ನು ಪುರಸ್ಕರಿಸಬಾರದು ಎಂದು ಒತ್ತಾಯಿಸಿದರು.

ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿರುವ ಜಮೀನಿನಲ್ಲಿ ಸುಮಾರು 60 ರಿಂದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸದರಿ ಭೂಸ್ವಾಧೀನ ಪ್ರಕ್ರಿಯೆ ಸಾರ್ವಜನಿಕ ಉದ್ದೇಶದಿಂದ ಹೊರತಾಗಿ ಟೌನ್‌ಶಿಪ್ ಉದ್ದೇಶದ ಪ್ರಕ್ರಿಯೆ ಆಗಿರುವುದರಿಂದ ರೈತರ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಭೂ ಸ್ವಾಧೀನ ಪ್ರಕ್ರಿಯೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಕೆಲವೊಂದು ರೈತರು ಭೂಮಿ ಕೊಡುವುದಾಗಿ ಹೇಳಿದ್ದಾರೆ. ಅಂತಹವರನ್ನು ಹೊರತುಪಡಿಸಿ ಭೂಮಿ ಕೊಡುವುದಿಲ್ಲ ಎಂದು ಹೇಳುವ ಉಳಿದ ರೈತರ ಭೂಮಿಯನ್ನು ಕೊಡುವುದಿಲ್ಲ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ತಡೆಯಲು ಮೇಲ್ಮಟ್ಟದಲ್ಲಿ ಸರ್ಕಾರಕ್ಕೆ ರೈತರ ಪರವಾಗಿ ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ವಿಶೇಷ ಭೂ ಸ್ವಾಧೀನಾಧಿಕಾರಿ ವೆಂಕಟರಾಜು ಅವರು, ರೈತರ ಮನವಿ ಸ್ವೀಕರಿಸಿ, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲದೆ ಜು. 24 ಅಥವಾ 25ರಂದು ನಮ್ಮ ಕಚೇರಿಯಲ್ಲಿ ಈ ಸಂಬಂಧ ರೈತರ ಸಭೆ ಆಯೋಜಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಮುಖಂಡರಾದ ನಂಜುಂಡೇಗೌಡ, ಪುಟ್ಟಮಾಧು, ವಸಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net