

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ರಂಗ ಚಟುವಟಿಕೆಯೇ ನನ್ನ ಬದುಕಿನ ಯಶಸ್ಸಿನ ಸೂತ್ರ. ಸವಾಜ ಮತ್ತು ಬದುಕಿಗೆ ರಂಗಭೂಮಿ ಕೊಡುಗೆ ಅಪಾರ. ಪಠ್ಯಕ್ಕಿಂತ ರಂಗ ಚಟುವಟಿಕೆಗಳ ನೆನಪು ನನಗೆ ಇಂದಿಗೂ ಚಿರಸ್ಥಾಯಿಯಾಗಿದೆ. ಭೋಜ ಶೆಟ್ಟಿ ನಮ್ಮ ಸಮಕಾಲೀನರು. ರಂಗದಲ್ಲಿ ಅವರ ಒಡನಾಟವೇ ಸುಂದರ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡ ರಂಗಗೀತೆ ಉಪನ್ಯಾಸ, ಸನ್ಮಾನ, ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿರಿಯ ರಂಗಕರ್ಮಿ ಡಾ.ನರಸಿಂಹಮೂರ್ತಿ ಆರ್. ಮಾತನಾಡಿ, ಲಲಿತಕಲೆಗಳ ಸಂಗಮ ಕ್ಷೇತ್ರವೇ ರಂಗಭೂಮಿ. ಪಂಚೇಂದ್ರಿಯ ಮೂಲಕ ನೆಮ್ಮದಿ ನೀಡುವ ಮನುಷ್ಯ ಕೃತ ಕ್ರಿಯೆಗಳೇ ಕಲೆ. ಪ್ರಾಚೀನ ಭಾರತದಲ್ಲಿ 64 ಕಲೆಗಳನ್ನು ಗುರುತಿಸಲಾಗಿದೆ. ನಾಟಕ ಎಂಬುದು ಕಲಾ ರಸಾಯನ. ಹಲವು ಕಲೆಗಳ ಮೇಳೈಸುವಿಕೆ ಎಂದರು.
ಜೀವನ್ ರಾಮ್ ಸುಳ್ಯ ಮಾತನಾಡಿ ನಾಟಕವಿಲ್ಲದೇ ಜೀವನ ಇಲ್ಲ. ನಾವು ರಂಗದಲ್ಲಿ ನಾಟಕಕಾರರು, ಆದರೆ ಎಲ್ಲರೂ ಜೀವನದಲ್ಲಿ ನಾಟಕಕಾರರು. ಪಾತ್ರಗಳು ವಾತ್ರ ವಿಭಿನ್ನ. ಎಲ್ಲ ವೃತ್ತಿಗಳು ‘ನಾಟಕ’ ಬಯಸುತ್ತವೆ ಎಂದರು.
ಜೀವನ್ ರಾಮ್ ಸುಳ್ಯ, ವಿದುಷಿ ಸುಮನಾ ಪ್ರಸಾದ್ ಮತ್ತು ಮಮತಾ ಕಲ್ಮಕಾರು ರಂಗಗೀತೆಗಳನ್ನು ಹಾಡಿದರು. ಚಿನ್ಮಯ ಕಮಲಾಕರ ಭಟ್ ಹಾಗೂ ಮನುಜ ನೇಹಿಗ ಹಿನ್ನೆಲೆಯಲ್ಲಿ ಸಹಕರಿಸಿದರು. ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.
ವಿಶ್ವರಂಗ ಸನ್ಮಾನ
ರಂಗಭೂಮಿ, ಚಲನಚಿತ್ರ ಕಲಾವಿದ ಎಂ.ಭೋಜ ಶೆಟ್ಟಿ ತೋಟದಮನೆ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ ಶಶಿರಾಜ್ ಕಾವೂರು ಬರೆದ ‘ಏಕಾದಶಾನನ’ ನಾಟಕವನ್ನು ಕೇಂದ್ರದ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಮನುಜ ನೇಹಿಗ ಸಂಗೀತ ನೀಡಿದರು.