

ಹನೂರು: ಭೀಮಾ ಕೋರೆಗಾಂವ್ ವಿಜಯ ದಲಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ರಾಮಲಿಂಗಂ ತಿಳಿಸಿದರು.
ತಾಲೂಕಿನ ಮಾರ್ಟಳ್ಳಿ ಸೆಂಟ್ ಮೇರಿಸ್ ಪ್ರೌಢಶಾಲೆ ಆವರಣದ ಸಮುದಾಯ ಭವನದಲ್ಲಿ ಗುರುವಾರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಯೋಜಿಸಿದ್ದ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೇಶ್ವೆಗಳ ಆಡಳಿತ ಅವಧಿಯಲ್ಲಿ ದಲಿತ ಸಮುದಾಯವನ್ನು ಕೀಳಾಗಿ ಕಾಣುತ್ತಿದ್ದರು. ಇದರಿಂದ ಗೌರವಕ್ಕೆ ಧಕ್ಕೆಯಾಗಿತ್ತು. ಇದರ ಪರಿಣಾಮ 28 ಸಾವಿರ ಪೇಶ್ವೆಗಳ ಸೈನಿಕರ ವಿರುದ್ಧ 500 ಜನ ಮಹಾರ್ ಸೈನಿಕರು ಸ್ವಾಭಿಮಾನದಿಂದ ಹೋರಾಡಿ ಅವರನ್ನು ಬಗ್ಗು ಬಡಿದು ಜಯಗಳಿಸಿದರು. ಹಾಗಾಗಿ ಈ ಯುದ್ಧ ದಲಿತರಿಗೆ ಸ್ವಾಭಿಮಾನದ ಸಂಕೇತವಾಗಿದೆ. ಆದರೆ ಈ ಶೌರ್ಯ ಘಟನೆಯನ್ನು ಮರೆ ಮಾಚಲಾಗಿತ್ತು. ಇದನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಅಧ್ಯಯನದ ಮೂಲಕ ಬೆಳಕು ಚೆಲ್ಲಿದರು. ಈ ದಿಸೆಯಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ. ಜತೆಗೆ ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣಕ್ಕೆ ಹಚ್ಚಿನ ಒತ್ತನ್ನು ನೀಡುವುದರ ಮೂಲಕ ಪ್ರತಿಯೊಬ್ಬರೂ ಹೋರಾಟದ ಮೂಲಕ ಹಕ್ಕನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕು. ಜತೆಗೆ ಜ.1 ರಂದು ರಜಾ ದಿನವನ್ನಾಗಿ ಘೋಷಿಸಲು ಸರ್ಕಾರವನ್ನು ಒತ್ತಾಯಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಸೆಂಟ್ ಮೇರಿಸ್ ಪ್ರೌಢಶಾಲೆಯ ವ್ಯವಸ್ಥಾಪಕ ಫಾದರ್ ಟೆನ್ನಿಕುರಿಯನ್, ಸಾಹಿತಿ ಮುಳ್ಳೂರು ಶಿವಮಲ್ಲು ಹಾಗೂ ಇನ್ನಿತರರು ಮಾತನಾಡಿದರು. ಇದಕ್ಕೂ ಮುನ್ನಾ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಸಂದನಪಾಳ್ಯ ಗುಡ್‌ಶೆಫರ್ಡ್ ಸಂಸ್ಥೆಯ ಸಿಸ್ಟರ್ ಈಸೆಬೆಲ್ಲಾ, ಸಮಿತಿಯ ರಾಜ್ಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ಜಿಲ್ಲಾ ಮೈಸೂರು ವಿಭಾಗೀಯ ಸಂಚಾಲಕ ಕೆ.ವೀರ, ಜಿಲ್ಲಾ ಸಂಚಾಲಕ ಹಿಂಡಯ್ಯ, ಮಹಿಳಾ ಸಂಚಾಲಕಿ ಭಾಗ್ಯಮ್ಮ, ಗ್ರಾಪಂ ಅಧ್ಯಕ್ಷ ಇಗ್ನೇಷಿ ಮುತ್ತು, ಪ್ರಥಮ ದರ್ಜೆ ಗುತ್ತಿಗೆದಾರ ವಾಲೆ ಮಾದೇವ ಹಾಗೂ ಇನ್ನಿತರರು ಇದ್ದರು.