

ಬೆಂಗಳೂರು: ಭಾರತೀಯ ಸೇನೆಯ ಮೀಸಲು ಘಟಕ ಟೆರಿಟೋರಿಯಲ್ ಆರ್ಮಿಯ ಕಮಿಷನ್ಡ್ ಆಫೀಸರ್ ಆಗಿ ಕರ್ನಾಟಕ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ ಸೇರ್ಪಡೆಯಾಗಿದ್ದಾರೆ.
ಈ ಕುರಿತು 'ಎಕ್ಸ್' ವೇದಿಕೆಯಲ್ಲಿ ಸಂತಸ ಹಂಚಿಕೊಂಡಿದ್ದು, 'ಭಾರತೀಯ ಸೇನೆಯ ಭಾಗವಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಡಿಜಿಟಿಎ 2022ರಲ್ಲಿ ನಡೆಸಿದ ಟಿಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದು, ಟೆರಿಟೋರಿಯಲ್ ಆರ್ಮಿಯಲ್ಲಿ ದಕ್ಷಿಣ ಭಾರತದಿಂದ ಕಮಿಷನ್ಡ್ ಆಫೀಸರ್ ಆದ ಏಕೈಕ ಮಹಿಳೆ ನಾನಾಗಿದ್ದೇನೆ' ಎಂದು ತಿಳಿಸಿದ್ದಾರೆ.
ಟೆರಿಟೋರಿಯಲ್ ಆರ್ಮಿಗೆ ಸೇರಿಕೊಂಡವರು, ಅಗತ್ಯ ಬಿದ್ದಾಗ ಭಾರತೀಯ ಸೇನೆಯೊಂದಿಗೆ ಸ್ವಯಂಸೇವಕರಂತೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ದೇಶಾದ್ಯಂತ ಐದು ವಲಯಗಳನ್ನು ಹೊಂದಿರುವ ಈ ಸೇನೆಯಲ್ಲಿ 40 ಸಾವಿರಕ್ಕೂ ಅಧಿಕ ಸ್ವಯಂಸೇವಕರಿದ್ದಾರೆ. ಇಲ್ಲೂ ಕಮಿಷನ್ಡ್ ಹಾಗೂ ನಾನ್ ಕಮಿಷನ್ಡ್ ಹುದ್ದೆಗಳಿವೆ. ಸೇರ್ಪಡೆಗೊಂಡವರು ವರ್ಷದಲ್ಲಿ ಕನಿಷ್ಠ ಎರಡು ತಿಂಗಳು ಸ್ವಯಂ ಸೇವಕರಾಗಿ ಭಾರತೀಯ ಸೇನೆಯೊಂದಿಗೆ ಕೆಲಸ ಮಾಡಬಹುದಾಗಿದೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಡಿಪಾರ್ಟ್ಮೆಂಟಲ್ ಹಾಗೂ ನಾನ್ ಡಿಪಾರ್ಟ್ಮೆಂಟಲ್ ಎಂಬ ಎರಡು ವಿಭಾಗಗಳಿವೆ. ಭವ್ಯಾ ಅವರು ನಾನ್ ಡಿಪಾರ್ಟ್ಮೆಂಟಲ್ ವಿಭಾಗದಿಂದ ಕಮಿಷನ್ಡ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.