ಭಟ್ಕಳದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಿ

7-BKL-11
Published on

ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ವಿವಿಧ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಜ್ಲಿಸೆ ಇಸ್ಲಾಹ ವ ತಂಝೀಂ, ಭಾರತ ವಿಕಾಸ ಸಮಿತಿ, ಜೆಸಿಐಸಿಟಿ, ರಬಿತಾ ಸೊಸೈಟಿ, ಭಟ್ಕಳ ಮುಸ್ಲಿಂ ಯೂತ್ ಫೆಡರೇಷನ್ ವತಿಯಿಂದ ರೈಲು ನಿಲ್ದಾಣ ಅಧಿಕಾರಿ ಮೂಲಕ ಕೊಂಕಣ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ನಿತ್ಯ ಸಂಚರಿಸುವ ಕೊಚುವೆಲಿ-ಭಾವನಗರ, ಕೊಚುವೆಲಿ-ಗಂಗಾನಗರ, ತ್ರಿವೆಂಡ್ರಮ್-ವೆರವಾಲ, ನಾಗರಕೊಯ್ಲ-ಗಾಂಧಿಧಾಮ ಎಕ್ಸಪ್ರೆಸ್, ಎರ್ನಾಕುಲಮ್-ಪುಣೆ ಸೂಪರ್ ಫಾಸ್ಟ್, ಕೊಚುವೆಲಿ-ಮುಂಬೈ ಎಲ್ಟಿಟಿ, ವಾರಕೊಮ್ಮೆ ಸಂಚರಿಸುವ ತ್ರಿವೆಂಡ್ರಮ್-ನಿಜಾಮುದ್ದೀನ್ ರಾಜನಿಧಿ ಎಕ್ಸಪ್ರೆಸ್ ರೈಲು ಭಟ್ಕಳ ನಿಲ್ದಾಣದಲ್ಲಿ ನಿಲುಗಡೆ ಆಗುತ್ತಿಲ್ಲ. ಈ ಎಕ್ಸಪ್ರೆಸ್ ರೈಲುಗಳು ಭಟ್ಕಳದಲ್ಲಿ ನಿಲುಗಡೆ ಆದರೆ ಇಲ್ಲಿಂದ ಮುಂಬೈ, ಪುಣೆ ಮುಂತಾದ ದೂರದ ಊರುಗಳಿಗೆ ತೆರಳಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಭಟ್ಕಳದ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಲು ಉಡುಪಿ ಅಥವಾ ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ, ಎಲ್ಲ ರೈಲುಗಳನ್ನು ಭಟ್ಕಳದ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಬಿತಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅತೀಕುರೆಹಮಾನ ಮುನಿರಿ, ತಂಝೀಂ ಸಂಸ್ಥೆಯ ಸುಹೈಲ್, ಅಝೀಜುರ್ ರೆಹಮಾನ್, ಮೊಹ್ಮದ್ ಅಸ್ಫಾಕ್, ಜೆಸಿಐ ಸಿಟಿ ಘಟಕದ ಅಧ್ಯಕ್ಷೆ ಶಾಹಿನಾ ಶೇಖ್, ಅಬ್ದುಲ್ ಜಬ್ಬಾರ್, ಸತೀಶಕುಮಾರ ನಾಯ್ಕ, ರಮೇಶ ಖಾರ್ವಿ,ಪಾಂಡುರಂಗ ನಾಯ್ಕ, ನಝೀರ ಕಾಶೀಮಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net