ಭಾರತ್​ ಬಂದ್​ಗೆ ರಾಜ್ಯದ ಕಾಂಗ್ರೆಸ್​-ಜೆಡಿಎಸ್​ ಬೆಂಬಲ ಇದ್ಯಾ?

Congress JDS 12 Feb 20
Published on

ಬೆಂಗಳೂರು: ಹೊಸ ಕೃಷಿ ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತಪರ ಸಂಘಟನೆಗಳು ಕರೆ ನೀಡಿರುವ ಡಿಸೆಂಬರ್ 8ರ ಭಾರತ ಬಂದ್​ಗೆ ಕರ್ನಾಟಕದಲ್ಲೂ ಕಾಂಗ್ರೆಸ್​ ಮತ್ತು ಜೆಡಿಎಸ್​ ಬೆಂಬಲ ಸೂಚಿಸಿವೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತರ ಬಂದ್ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡಲಿದೆ. ನಮ್ಮ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಬೆಂಬಲ ಕೊಡುವಂತೆ ಸೂಚನೆ ಕಳಿಸಲಾಗಿದೆ. ಕಾಂಗ್ರೆಸ್ ರೈತರ ಪರ. ವಿವಾದಿತ ಮೂರೂ ಕಾಯ್ದೆಗಳನ್ನೂ ಕೇಂದ್ರ ಸರ್ಕಾರ ವಾಪಸ್ ಪಡೆಯಲಿ ಎಂದು ಆಗ್ರಹಿಸಿದರು.

ಸರ್ಕಾರ ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯ ಇಲ್ಲ. ಗೋಹತ್ಯೆ ತಡೆ ಕಾಯ್ದೆಗೆ ನಮ್ಮ ವಿರೋಧ ಇದೆ. ಇದು ರೈತರಿಗೆ ಮಾರಕವಾಗುವ ಕಾಯ್ದೆ. ರೈತರ ಪರ ನಮ್ಮ ಬೆಂಬಲ ಇದೆ. ನಾವು ವಿದಾನಸೌಧ ಆವರಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ ಎಂದರು.

ಇನ್ನು ರೈತರ ಪ್ರತಿಭಟನೆಗೆ ಜೆಡಿಎಸ್ ಬೆಂಬಲ ಇದೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನನ್ನು ಜಾರಿ ಮಾಡ್ತಿದೆ. ರೈತರ ಪ್ರತಿಭಟನೆಗೆ ಮನ್ನಣೆ ಇಲ್ಲ. ರೈತರನ್ನು ನಿರ್ಲಕ್ಷಿಸಿದ ಸರ್ಕಾರಗಳು ಉಳಿದಿಲ್ಲ. ರೈತರ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ಸಲುವಾಗಿ ಜೆಡಿಎಸ್ ಸದನ ಬಹಿಷ್ಕಾರ ಮಾಡುವುದು ಒಳ್ಳೆಯದು. ಈ ಬಗ್ಗೆ ಸಂಜೆ ಎಚ್​.ಡಿ. ದೇವೇಗೌಡರ ಜತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net