

ಹೈದರಾಬಾದ್: ಹೈದರಾಬಾದ್ ಮೂಲದ ಬಯೋಟೆಕ್ನಾಲಜಿ ಕಂಪನಿ ಭಾರತ ಬಯೋಟೆಕ್ ತಾನು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದನ್ನು ನಾಳೆಯಿಂದ (ಜುಲೈ 1) ಮಾನವರ ಮೇಲೆ ಪ್ರಯೋಗಿಸಲು ಆರಂಭಿಸಲಿದೆ.
ತಾನು ಕೊವಾಕ್ಸಿನ್ ಎಂಬ ಭಾರತದ ಮೊದಲ ಕೋವಿಡ್-19 ರೋಗನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿರುವುದಾಗಿ ಕಂಪನಿ ಸೋಮವಾರ ಹೇಳಿಕೊಂಡಿತ್ತು. ಈ ಚುಚ್ಚುಮದ್ದನ್ನು ಮಾನವರ ಮೇಲೆ ಪ್ರಯೋಗಿಸಲು ಭಾರತೀಯ ಔಷಧ ನಿಯಂತ್ರಣ ಮಹಾಪ್ರಧಾನ ಕಂಟ್ರೋಲರ್ ಅವರಿಂದ ಅನುಮತಿ ಪಡೆದುಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದಲ್ಲಿ ಕೊವಾಕ್ಸಿನ್ ರೋಗನಿರೋಧಕ ಚುಚ್ಚುಮದ್ದನ್ನು ಸಿದ್ಧಪಡಿಸಿರುವುದಾಗಿ ಕಂಪನಿಯ ಚೇರ್ಪರ್ಸನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ ತಿಳಿಸಿದ್ದಾರೆ.