ಮೋಕ್ಷ ಪ್ರಾಪ್ತಿಗೆ ಭಕ್ತಿ ಮಾರ್ಗವೇ ಪ್ರಧಾನ; ಕೇಂದ್ರ ಸಚಿವ ಶ್ರೀಪಾದ ನಾಯಕ

SOMADEVARAHATTI JATRE
ತಿಕೋಟಾ ತಾಲೂಕಿನ ಸುಕ್ಷೇತ್ರ ಸೋಮದೇವರ ಹಟ್ಟಿಯಲ್ಲಿ ನಡೆದ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಗನು ಮಹಾರಾಜ್, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಮತ್ತಿತರರಿದ್ದಾರೆ.
Published on

ವಿಜಯಪುರ: ಮೋಕ್ಷ ಪ್ರಾಪ್ತಿಗೆ ಭಕ್ತಿ ಮಾರ್ಗವೇ ಪ್ರಧಾನ. ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯುವ ಮೂಲಕ ದುರ್ಗಾದೇವಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ ಹೇಳಿದರು.

ತಿಕೋಟಾ ತಾಲೂಕಿನ ಸುಕ್ಷೇತ್ರ ಸೋಮದೇವರ ಹಟ್ಟಿಯಲ್ಲಿ ಶುಕ್ರವಾರ ನಡೆದ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಷ್ಟೋ ಜನ್ಮಗಳ ನಂತರ ಈ ಮಾನವ ಜನ್ಮ ದೊರಕಿದೆ. ಈ ಮಾನವ ಜನ್ಮ ಸಾರ್ಥಕವಾಗಿಸಿಕೊಳ್ಳುವುದು ಭಕ್ತಿ ಮಾರ್ಗದಿಂದ ಮಾತ್ರ ಸಾಧ್ಯ. ದೊಡ್ಡ ದೊಡ್ಡ ವಾಹನ ಖರೀದಿಸುವುದೇ ಸಾಧನೆಯಲ್ಲ, ಭಗವಂತ ಕರುಣಿಸಿದ ಈ ಜೀವನ ಸದುಪಯೋಗವಾಗಬೇಕು ಎಂದರು.
ತಾಯಿ ದುರ್ಗಾ ದೇವಿಯ ಅನುಗ್ರಹವಿದ್ದರೆ ಮಾತ್ರ ಈ ಸುಕ್ಷೇತ್ರ ತಲುಪಬಹುದು, ಭಕ್ತಿ ಮಾರ್ಗದಿಂದ ತಾಯಿ ದುರ್ಗಾದೇವಿ ಕೃಪೆಗೆ ಪಾತ್ರರಾಗಬೇಕು. ಮಾತಾ ದುರ್ಗಾದೇವಿ ಕೃಪೆಯಿಂದ ಸಕಲ ಸಮುದಾಯಗಳ ಒಳಿತಿಗಾಗಿ ಜಗನು ಮಹಾರಾಜರು ಶ್ರಮಿಸುತ್ತಿದ್ದಾರೆ. ಅವರಿಗೆ ಒಳಿತಾಗಲಿ ಎಂದು ಆಶಿಸಿದರು.

500 ಕೋಟಿ ರೂ. ಅನುದಾನ ಒದಗಿಸಿ

ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ ಮಾತನಾಡಿ, ಬಂಜಾರಾ ಸಮಾಜದ ಸರ್ವತೋಮುಖ ಪ್ರಗತಿ, ತಾಂಡಾ ಪ್ರಗತಿಗೆ ಸರ್ಕಾರ ತಾಂಡಾ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಬಂಜಾರಾ ಸಮಾಜ ಬೆವರು ಹರಿಸಿ ದುಡಿಯುವುದಕ್ಕೆ ಹೆಸರಾಗಿದೆ. ಈ ಸಮಾಜ ಇಡೀ ರಾಷ್ಟ್ರದ ಸ್ವತ್ತು. ಪ್ರತಿ ಅಭಿವೃದ್ಧಿ ಕಾರ್ಯದ ಹಿಂದೆ ಬಂಜಾರಾ ಸಮಾಜದ ಜನರ ಶ್ರಮ ಅಡಗಿದೆ. 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರಾ ಸಮಾಜಕ್ಕೆ ಜನಸಂಖ್ಯೆ ಆಧರಿಸಿ ಸೌಲಭ್ಯಗಳು ದೊರಕಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಬರಪೀಡಿತ ಜಿಲ್ಲೆ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರವನ್ನು ಸಮಗ್ರ ನೀರಾವರಿಗೆ ಒಳಪಡಿಸಲಾಗಿದೆ. ಡಾ.ಎಂ.ಬಿ. ಪಾಟೀಲರು ನೀರಾವರಿ ಸಚಿವರಾದ ಫಲವಾಗಿ ಇಂದು ನೀರಾವರಿ ಕ್ಷೇತ್ರ ಹೆಚ್ಚಾಗಿದೆ ಎಂದರು.

ಈ ಭೂಮಿಗೆ ಒಂದು ಬೊಗಸೆ ನೀರು ಕೊಟ್ಟರೆ ಈ ನಾಡು ಬಂಗಾರವಾಗುತ್ತದೆ ಎಂಬ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯವನ್ನು ನನಸು ಮಾಡಿದ ಸಚಿವ ಎಂ.ಬಿ. ಪಾಟೀಲರು ನೀರಾವರಿ ಅಸಾಧ್ಯ ಎನ್ನುವ ಪ್ರದೇಶದಲ್ಲೂ ಬೃಹತ್ ಅಕ್ವಾಡೆಕ್ಟ್ ಮೂಲಕ ನೀರಾವರಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಬಂಜಾರಾ ಸಮಾಜ ಇಡೀ ವಿಶ್ವದಲ್ಲೇ ವಿಶಿಷ್ಟ ಸಂಸ್ಕೃತಿ, ಶ್ರಮ ಸಂಸ್ಕೃತಿ, ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದೆ ಎಂದರು.

ಮಗು ಇರುವಲ್ಲಿ ನಗುವಿದೆ, ಮಗು ಇರುವಲ್ಲಿ ಭಗವಂತನಿದ್ದಾನೆ, ಮಕ್ಕಳಿಗೆ ದುಡಿಯಲು ಕಳುಹಿಸದೇ ಶಾಲೆಗೆ ಕಳುಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಸುಕ್ಷೇತ್ರ ಪೌರಾದೇವಿ ದೇವಾಲಯದ ಜೀತು ಮಹಾರಾಜರು ಆಶೀರ್ವಚನ ನೀಡಿದರು.

ಧರ್ಮದರ್ಶಿ ಜಗನು ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಮುಂಬಯಿ ಸಂಸದ ಸಂಜಯ ಪಾಟೀಲ, ಐಎಎಸ್ ಅಧಿಕಾರಿ ಕಪಿಲ್ ಮೋಹನ್, ಗೋವಾ ರಾಜ್ಯದ ಮಾಜಿ ಸಚಿವ ದೀಪಕ ಪಾವಸ್ಕರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಡಾ.ಕೆ.ಬಿ. ನಾಗೂರ, ಡಾ.ಬಾಬು ರಾಜೇಂದ್ರ ನಾಯಕ, ಹೈದ್ರಾಬಾದ್ ಐಜಿ ನಾರಾಯಣ ನಾಯಕ, ಗೋವಾ ಕನ್ನಡಿಗರ ಪರ ಹೋರಾಟಗಾರ ಮೋಹನ ಶೆಟ್ಟಿ, ಡಿ.ಎಲ್. ಚವಾಣ್, ಸೋಮನಾಥ ಬಾಗಲಕೋಟ, ಮಹೇಂದ್ರ ನಾಯಕ, ಅನುಸೂಯಾ ಜಾಧವ, ರಾಜಪಾಲ ಚವಾಣ್, ಸೋಮಶೇಖರ ರಾಠೋಡ ಮತ್ತಿತರರಿದ್ದರು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಗೋವಾ ಮತ್ತಿತರ ರಾಜ್ಯಗಳಿಂದ ಧುರೀಣರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net