

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಭಜಕನಿಗೆ ಕಾಳಜಿ ಇರಬೇಕು. ಜ್ಞಾನ, ಭಕ್ತಿ-ಶ್ರದ್ಧೆ ಇರಬೇಕು. ಭಕ್ತಿ ಇಲ್ಲದ ಭಜನೆ ವ್ಯರ್ಥ ಎಂದು ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟದ 2ನೇ ದಿನ ಸೋಮವಾರ ‘ಆರೋಗ್ಯಕರ ಅಭ್ಯಾಸ’ ಕುರಿತು ಉಪನ್ಯಾಸ ನೀಡಿದರು.
ಸಮುದ್ರ ಯಾರನ್ನೂ ಮುಳುಗಿಸುವುದಿಲ್ಲ. ದೋಣಿಯಲ್ಲಿರುವ ದೋಷ ಮುಳುಗಿಸುತ್ತದೆ. ದುರಾಭ್ಯಾಸ ವ್ಯಕ್ತಿಯನ್ನು ಮುಗಿಸುತ್ತದೆ. ವ್ಯಸನದಲ್ಲಿ ಬಿದ್ದವ ವ್ಯಸನದಲ್ಲೇ ಸಾಯುತ್ತಾನೆ. ವ್ಯಸನಿಯಾದ ವ್ಯಕ್ತಿಯನ್ನು ಕುಟುಂಬ, ಸಮಾಜ ದೂರ ಮಾಡುತ್ತದೆ. ವ್ಯಕ್ತಿಯ ಸೋಲಿಗೆ ದೌರ್ಬಲ್ಯಗಳೇ ಮೂಲ ಕಾರಣ. ಯಾವ ಹೆಣ್ಣಿಗೂ ಕುಡುಕ ಗಂಡ ಬೇಡ, ಯಾವ ಕುಟುಂಬಕ್ಕೂ ಬೇಡ, ಯಾವ ದೇವರಿಗೂ ಕುಡುಕ ಭಕ್ತ ಬೇಡ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ, ಮನೋರಮಾ ತೋಳ್ಪಾಡಿತ್ತಾಯ, ಸುನೀಲ್ ಕಲ್ಕೋಪ್ಪ ಭಜನಾ ಹಾಡುಗಳನ್ನು 176 ಮಂದಿ ಭಜಕರಿಗೆ ಕಲಿಸಿಕೊಟ್ಟರು. ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದರು.
ಭಜನಾ ಕಮ್ಮಟದ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್ ದಿನದ ಕಾರ್ಯಕ್ರಮ ಸಂಘಟಿಸಿದರು. ಪೂರ್ಣಿಮಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಉಜಿರೆ ಎಸ್‌ಡಿಎಂ ರಂಗ ಶಿಕ್ಷಣ ಕೇಂದ್ರ ವತಿಯಿಂದ ‘ಬೇಂದ್ರೆ’ ನಾಟಕ ಪ್ರದರ್ಶಿಸಲಾಯಿತು. ಯೋಗ ತರಬೇತಿಯನ್ನು ಡಾ.ಐ.ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಸದಸ್ಯರಾದ ಸತೀಶ್ ಪೈ, ಮೋಹನ್ ಶೆಟ್ಟಿ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರಾ ನಡೆಸಿಕೊಟ್ಟರು. ಶಿಬಿರಾರ್ಥಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.