ಧರ್ಮದ ಹಾದಿಗೆ ಭಜನೆ ಪ್ರೇರಣೆ: ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

Bel_Bhajane
Published on

ಉಜಿರೆ: ಸಾಹಿತ್ಯಕ್ಕೂ ಸಂಗೀತಕ್ಕೂ ಅವಿನಾಭಾವ ಸಂಬಂಧವಿದ್ದು, ಅಂತರಾತ್ಮದಲ್ಲಿ ದೇವರನ್ನು ಸ್ಮರಿಸಿ ಧ್ಯಾನ ಮಾಡಿ ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡಿದರೆ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಮಕ್ಕಳಿಗೆ ನಿತ್ಯವೂ ಭಜನೆ ಹಾಡುವ ಸಂಸ್ಕಾರವನ್ನು ನೀಡಿದರೆ ಅವರು ಧರ್ಮದ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಭಾನುವಾರ ಬೆಳ್ತಂಗಡಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಭಾರತೀಯ ಜೈನ್‌ಮಿಲನ್ ನೇತೃತ್ವದಲ್ಲಿ ಬೆಳ್ತಂಗಡಿ ಜೈನ್‌ಮಿಲನ್ ಶಾಖೆಯ ಸಹಯೋಗದೊಂದಿಗೆ ಆಯೋಜಿಸಿದ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸೋಮವಾರ ಹೆಗ್ಗಡೆಯವರ 76ನೇ ಜನ್ಮದಿನ ಆಚರಣೆಗಾಗಿ ನಿರೀಕ್ಷಾ ಹೊಸ್ಮಾರು ಜನ್ಮದಿನದ ಶುಭಾಶಯ ಕೋರುವ ಹಾಡನ್ನು ಹಾಡಿದರು. ಜೈನ್‌ಮಿಲನ್ ವತಿಯಿಂದ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಅರ್ಪಿಸಲಾಯಿತು.

ಭಾರತೀಯ ಜೈನ್‌ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷೆ ಅನಿತಾ ಸುರೇಂದ್ರಕುಮಾರ್, ಉಜಿರೆಯ ಸೋನಿಯಾ ಯಶೋವರ್ಮ, ಪೂರಣ್ ವರ್ಮ, ಪೆರಿಂಜೆ ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್, ಭಾರತೀಯ ಜೈನ್‌ಮಿಲನ್ ವಲಯ 8ರ ಕಾರ್ಯಾಧ್ಯಕ್ಷ ಪ್ರಸನ್ನಕುಮಾರ್, ಮೂಡುಬಿದಿರೆಯ ನೋಟರಿ ಶ್ವೇತಾ ಜೈನ್, ಕಾರ್ಕಳದ ಶಶಿಕಲಾ ಹೆಗ್ಡೆ, ವೇಣೂರು ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ, ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಸುಮಂತ್‌ಕುಮಾರ್ ಜೈನ್ ಹಾಗೂ ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್ ಉಪಸ್ಥಿತರಿದ್ದರು.

ಸುದರ್ಶನ್ ಜೈನ್ ಬಂಟ್ವಾಳ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಜಿರೆಯ ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕಿ ದಿವ್ಯಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸ್ಪರ್ಧೆಯಲ್ಲಿ ಹಿರಿಯರ ವಿಭಾಗದಲ್ಲಿ 45 ತಂಡಗಳು ಹಾಗೂ ಕಿರಿಯರ ವಿಭಾಗದಲ್ಲಿ 32 ತಂಡಗಳು ಸೇರಿ ಒಟ್ಟು 500ಕ್ಕೂ ಮಿಕ್ಕಿ ಸ್ಪರ್ಧಿಗಳು ಭಾಗವಹಿಸಿದರು.

ಭಜನೆಯನ್ನು ಸ್ಪರ್ಧೆಗಾಗಿ ಕಲಿಯದೆ ಮನೆಯಲ್ಲಿ ನಿತ್ಯವೂ ಸಹಜವಾಗಿ ಭಜನೆ ಹಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸೋಲು-ಗೆಲುವಿನ ಕುರಿತು ಚಿಂತಿಸದೆ ಎಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಿ ಭಜನಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.ಸಾಧ್ಯವಾದರೆ ಮಕ್ಕಳೇ ಸಾಹಿತ್ಯ ರಚನೆ ಮಾಡಿ ರಾಗ, ಭಾವ, ತಾಳ ಸಂಯೋಜನೆಯೊಂದಿಗೆ ಭಜನೆ ಹಾಡುವ ಅಭ್ಯಾಸ ಮಾಡಬೇಕು. - ಡಾ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ https://www.vijayavani.net/gadinada-cultural-festival-at-ananthapuri https://www.vijayavani.net/gadinada-cultural-festival-at-ananthapuri

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net