ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಭಜನೆ ಅನಾದಿ ಕಾಲದಿಂದಲೂ ಬಂದಿರುವ ಸಂಸ್ಕೃತಿ, ದೇವರನ್ನು ಭಕ್ತಿಯಿಂದ ಒಲಿಸಿಕೊಳ್ಳಲು ವಾರ್ಗ. ಸ್ತುತಿ ಕೀರ್ತನೆಗೆ ಅವಹೇಳನಕಾರಿಯಾಗಿ ಪ್ರಚೋದನೆಕಾರಿ ಮಾತುಗಳನ್ನಾಡಿ ಸಭ್ಯತೆಗೆ ಭಂಗ ತರುವ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ. ಅವರಿಗೆ ಭಗವಂತ ಒಳ್ಳೆಯ ಬುದ್ಧಿಯನ್ನು ನೀಡಲಿ. ಮನಸ್ಸು ಪರಿವರ್ತನೆ ಆಗುವಂತೆ ಅವಕಾಶ ಕೊಡಲಿ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಭಜನೆಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ಮತ್ತು ಭಜನೆ ವಿರುದ್ಧ ಮಾತನಾಡುವವರನ್ನು ಖಂಡಿಸಿ ಭಜನಾ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಜಿಲ್ಲೆಯ ವಿವಿಧ ಕುಣಿತ ಭಜನಾ ತಂಡಗಳಿಂದ ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಸಾವಿರ ಕಂಬದ ಬಸದಿಯಿಂದ ಸ್ವರಾಜ್ಯ ಮೈದಾನದವರೆಗೆ ಕುಣಿತ ಭಜನೆಯ ತಂಡಗಳು ದೇವರ ನಾಮಸ್ಮರಣೆಯನ್ನು ವಾಡುತ್ತಾ ಭಜನೆ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವ ಅವಿವೇಕಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸಿ ಮೆರವಣಿಗೆ ನಡೆಸಲಾಯಿತು.
ಹಿಂಜಾವೇ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ವಿಶ್ವ ಹಿಂದು ಪರಿಷತ್ ಕಾರ್ಯಾಧ್ಯಕ್ಷ ಶಾಮ್ ಹೆಗ್ಡೆ, ಸಾವಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರ ಕಾರ್ಕಳ, ಹಿಂದು ಸಂಟನೆ ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ರಂಜಿತ್ ಪೂಜಾರಿ ತೋಡಾರು, ಅಶೋಕ್ ಶೆಟ್ಟಿ ಬೇಲೊಟ್ಟು, ಮಂಜುನಾಥ್ ಬೆಳುವಾಯಿ, ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾವಾಂತರ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ, ಗಣೇಶ್ ಬಿ.ಅಳಿಯೂರು, ವಿಹಿಂಪ ಬಜರಂಗದಳದ ಸುಚೇತನ್ ಜೈನ್ ಮತ್ತಿತರರಿದ್ದರು.