ಸಾವಿರ ಮನೆಗಳಲ್ಲಿ ಭಾಗವತ ಅಭಿಯಾನ

udp-19-bhandarakeri sri
Published on

ಉಡುಪಿ: ಕರಾವಳಿಯಲ್ಲಿ ಶ್ರೀ ಮದ್ಭಾಗವತ ಸಾರುವ ಭಕ್ತಿ ಸಿದ್ಧಾಂತದ ಸಂದೇಶಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಶ್ರೀ ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಕಳೆದ ವರ್ಷದ ಚಾತುಮಾರ್ಸ್ಯ ವ್ರತದ ಸಂದರ್ಭ ಹಮ್ಮಿಕೊಂಡ ಸಾವಿರ ಮನೆಗಳಲ್ಲಿ ಭಾಗವತ ಅಭಿಯಾನ ಬುಧವಾರ ಸಂಪನ್ನಗೊಂಡಿದೆ.

ಜೂನ್​ 9 ರಿಂದ 18ರ ವರೆಗೆ ಮೂಡಬಿದಿರೆ, ಮುಲ್ಕಿ, ಸರತ್ಕಲ್​, ಹೆಬ್ರಿ, ಕಾರ್ಕಳ, ಕಟೀಲು ಮೊದಲಾದೆಡೆಗಳಲ್ಲಿ ಸುಮಾರು 140ಕ್ಕೂ ಅಧಿಕ ಮನೆಗಳಿಗೆ ಪಟ್ಟದ ದೇವರಾದ ಮಧ್ವಾಚಾರ್ಯ ಕರಾರ್ಚಿತ ಕೋದಂಡ ರಾಮದೇವರೊಂದಿಗೆ ತೆರಳಿದ ಶ್ರೀಪಾದರು ಭಾಗವತ ಗ್ರಂಥದ ಭಕ್ತಿ ಸಂದೇಶ ನೀಡಿ ಅನುಗ್ರಹಿಸಿದರು. ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳ ಸಮೀಪದ ರಘುರಾಮ್​ ಭಟ್​ ಎಂಬವರ ಮನೆಯಲ್ಲಿ 1000ನೇ ಭಾಗವತ ಪ್ರವಚನ ನಡೆಯಿತು.

ಹೆಬ್ರಿ ಅನಂತಪದ್ಮನಾಭ , ಪುತ್ತಿಗೆ ಸೋಮನಾಥೇಶ್ವರ, ಸಿಮಂತೂರು ಆದಿಜನಾರ್ದನ , ಅಲಂಗಾರು ಮಹಾಲಿಂಗೇಶ್ವರ , ಸಾಣೂರು ಮಹಾಲಿಂಗೇಶ್ವರ, ಕಟೀಲು ದುರ್ಗಾಪರಮೇಶ್ವರಿ ವಡಭಾಂಡೇಶ್ವರ ಬಲರಾಮ ದೇವಸ್ಥಾನಗಳು ಹಾಗೂ ಹೆಬ್ರಿ, ಪುತ್ತಿಗೆ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದರು. ಹೆಬ್ರಿ ಗಿಲ್ಲಾಳಿಯ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಪಟ್ಟದ ದೇವರ ರಾತ್ರಿಪೂಜೆಯನ್ನೂ ಶ್ರೀಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಶ್ರೀನಿವಾಸ ಬಾದ್ಯ , ವಿಷ್ಣುಪ್ರಸಾದ್​ ಪಾಡಿಗಾರ್​ , ಬೈಲೂರು ಜಯರಾಮಾಚಾರ್ಯ , ಚಂದ್ರಶೇಖರಾಚಾರ್ಯ , ವಾಸುದೇವ ಭಟ್​ ಪೆರಂಪಳ್ಳಿ , ಮಠದ ವ್ಯವಸ್ಥಾಪಕ ರಾಜೇಶ ಉಪಾಧ್ಯ ಪಣಿಯಾಡಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net