

ಮೈಸೂರು: ಅಸಮಾನತೆಯ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಹೋರಾಡಿದ ಮಹಾನ್ ಕ್ರಾಂತಿಕಾರಿ ಭಗತ್‌ಸಿಂಗ್ ಎಂದು ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ತಿಳಿಸಿದರು.
ಯುವ ಭಾರತ್ ಸಂಘಟನೆ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ಭಗತ್ ಸಿಂಗ್ ಅವರ 116ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ದೇಶಭಕ್ತ ಭಗತ್‌ಸಿಂಗ್ ಅವರ ಜೀವನ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸಣ್ಣ ವಯಸ್ಸಿನಲ್ಲಿಯೇ ನೇಣುಗಂಬಕ್ಕೆ ಏರಿದವರು. ಬಡವರು, ಶ್ರೀಮಂತರ ನಡುವಿನ ಅಂತರದ ವಿರುದ್ಧ ಸಿಡಿದರು ಎಂದರು
ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ಜಲಿಯನ್ ವಾಲಾಬಾಗ್ ದುರಂತದ ನಂತರದಲ್ಲಿ ಭಗತ್‌ಸಿಂಗ್ ಒಬ್ಬ ಕ್ರಾಂತಿಕಾರಿಯಾಗಿ ಬದಲಾಗುತ್ತಾರೆ. ಭಗತ್ ಸಿಂಗ್ ಅವರು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಭಗತ್ ಸಿಂಗ್, ರಾಜಗುರು, ಸುಖ್‌ದೇವ್ ಮೂವರು ಕೇವಲ 24 ವರ್ಷಗಳಿಗೆ ಗಲ್ಲಿಗೇರಿದವರು. ಇಂತಹ ಮಹಾತರು ಆದರ್ಶವಾಗಬೇಕು ಎಂದರು
ಯುವ ಜನರು ಕ್ರಾಂತಿಕಾರಿ ವಿಚಾರಗಳಿಂದ ದೂರವಾಗುತ್ತಿದ್ದಾರೆ. ಭಗತ್ ಸಿಂಗ್ ಕಂಡಂತಹ ಕನಸು ನನಸಾಗದೆ ಉಳಿದಿದೆ. ಭಗತ್ ಸಿಂಗ್ ಕೇವಲ ಸ್ವಾತಂತ್ರ್ಯವನ್ನು ಮಾತ್ರ ಬಯಸಿರಲಿಲ್ಲ. ಎಲ್ಲರಿಗೂ ಸಮಾನತೆ, ಜಾತಿ ಧರ್ಮಗಳಿಂದ ಮುಕ್ತವಾದ ಯುವಭಾರತ ಪರಿಕಲ್ಪನೆಯ ಸ್ವಾತಂತ್ರ್ಯವನ್ನು ಕೂಡ ಬಯಸಿದ್ದರು ಎಂದು ಹೇಳಿದರು.
ಪಾಲಿಕ ಮಾಜಿ ಸದಸ್ಯ ಜಗದೀಶ್, ಯುವ ಭಾರತ್ ಸಂಘಟನೆ ಸಂಚಾಲಕ ಅಜಯ್ ಶಾಸ್ತ್ರಿ, ಭೈರತಿ ಲಿಂಗರಾಜು, ಸವಿತಾ ಘಾಟ್ಕೆ, ನಂದೀಶ್ ನಾಯಕ್, ಶ್ರೀನಿವಾಸ್ ಇನ್ನಿತರರಿದ್ದರು