

ಶಿವಮೊಗ್ಗ: ವಾರಂತ್ಯದ ಖುಷಿಯಲ್ಲಿದ್ದ ಸ್ನೇಹಿತರು ಸೈಕಲ್‌ನಲ್ಲಿ ಸುತ್ತಾಡಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಶನಿವಾರ ಬೆಳಗ್ಗೆಯೇ ಮನೆ ಬಿಟ್ಟಿದ್ದ 11 ಸ್ನೇಹಿತರ ತಂಡ ಮಧ್ಯಾಹ್ನದ ವೇಳೆಗೆ ನಿಗದಿತ ಸ್ಥಳದಲ್ಲಿ ಸೇರಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ಮನೆಯಿಂದಲೇ ಕಟ್ಟಿಸಿಕೊಂಡು ಬಂದಿದ್ದ ಊಟ ಮಾಡಿದ್ದರು. ಇದಾದ ಕೆಲವೇ ಕ್ಷಣದಲ್ಲಿ 11 ಜನರ ಪೈಕಿ ಇಬ್ಬರು ಸ್ನೇಹಿತರ ಕಣ್ಣೆದುರಲ್ಲೇ ಪ್ರಾಣಬಿಟ್ಟಿದ್ದಾರೆ...
ಇಂತಹ ಹೃದಯವಿದ್ರಾವಕ ಘಟನೆ ಭದ್ರಾವತಿ ತಾಲೂಕು ದೊಡ್ಡ ಗೊಪ್ಪೇನಹಳ್ಳಿಯ ಆಂಜನೇಯ ಬಂಡೆ ಸಮೀಪ ಸಂಭವಿಸಿದೆ.
ಭದ್ರಾವತಿಯ ಜನ್ನಾಪುರದ ರಾಜೇಶ್ (38) ಹಾಗೂ ವೇಲೂರು ಶೆಡ್‌ನ ಮನೋಜ್ (17) ಮೃತರು. 11 ಜನ ಸ್ನೇಹಿತರು ವಾರಂತ್ಯ ಕಳೆಯಲು ನಗರ ಹೊರಹೊಲದಲ್ಲಿ ಸೈಕ್ಲಿಂಗ್ ಬಂದಿದ್ದರು. ಮಧ್ಯಾಹ್ನ ದೊಡ್ಡ ಗೊಪ್ಪೇನಹಳ್ಳಿ ಆಂಜನೇಯ ಬಂಡೆ ಬಳಿ ಎಲ್ಲೂ ಊಟ ಮುಗಿಸಿ ಸಮೀಪದ ಭದ್ರಾ ನದಿಯಲ್ಲಿ ಈಜಲು ಮನೋಜ್, ರಾಜೇಶ್, ಕಾರ್ತಿಕ್ ಮತ್ತಿತರರು ಈಜಾಡಲು ನೀರಿಗೆ ಇಳಿದಿದ್ದರು. ನೋಡನೋಡುತ್ತಿದ್ದಂತೆ ಮನೋಜ್ ಗುಂಡಿಯಲ್ಲಿ ಮುಳುಗುತ್ತಿದ್ದ. ಈತನನ್ನು ರಕ್ಷಿಸಲು ಹೋದ ರಾಜೇಶ್ ಕೂಡ ಮುಳುಗಿದ್ದು, ತಕ್ಷಣವೇ ರಕ್ಷಣೆಗೆ ಕೋರಿದ್ದರು. ಜತೆಯಲ್ಲಿದ್ದ ಸ್ನೇಹಿತರು ಎಷ್ಟೇ ಪ್ರಯತ್ನ ಪಟ್ಟರೂ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕಾರ್ತಿಕ್ ಪಾರಾಗಿದ್ದಾನೆ.
ಸ್ಥಳಕ್ಕೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಪೇಪರ್ ಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆ ನಡೆಸಿ ನದಿಯಿಂದ ಮೃತದೇಹಗಳನ್ನು ಹೊರತೆಗೆದರು. ಸ್ನೇಹಿತರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೇಪರ್ ಟೌನ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.