ಬೆಟ್ಟಿಂಗ್ ಆ್ಯಪ್ ಪ್ರಕರಣ: ಗೂಗಲ್, ಮೆಟಾಗೆ ಸಮನ್ಸ್ ನೀಡಿದ ಇಡಿ| Summons

Google-meta
Published on

Summons: ಆನ್​ಲೈನ್​ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಇಂದು(ಜು. 19) ಗೂಗಲ್, ಮೆಟಾ ಸಂಸ್ಥೆಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಅಕ್ರಮ ಆನ್​ಲೈನ್ ಬೆಟ್ಟಿಂಗ್​ ಆ್ಯಪ್​ಗಳಿಗೆ ಗೂಗಲ್, ಮೆಟಾ ಕಂಪನಿಗಳು ಪ್ರಚಾರ ನೀಡುತ್ತಿವೆ ಎನ್ನುವ ಆರೋಪ ಹಿನ್ನೆಲೆ ಸೋಮವಾರ (ಜು. 21) ದೆಹಲಿ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.

ಈ ಟೆಕ್‌ ಕಂಪನಿಗಳು ಬೆಟ್ಟಿಂಗ್​ ಆ್ಯಪ್​ಗಳಿಗೆ ಪ್ರಮುಖ ಜಾಹೀರಾತು ಸ್ಲಾಟ್‌ಗಳನ್ನು ಒದಗಿಸಿದ್ದು,  ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆ್ಯಪ್​ಗಳ ಪ್ರಚಾರೆಕ್ಕೆ ಅವಕಾಶವನ್ನು ನೀಡಿದೆ. ಮತ್ತೆ ಇವುಗಳನ್ನು ಪ್ರಮೋಟ್‌ ಮಾಡುತ್ತಿದೆ ಎಂದು ಇಡಿ ತನ್ನ ನೋಟೀಸ್‌ನಲ್ಲಿ ತಿಳಿಸಿದೆ.

ಮಹದೇವ್ ಬೆಟ್ಟಿಂಗ್ ಆ್ಯಪ್, ಪೇರ್​ಪ್ಲೇ ಆ್ಯಪ್​ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ, ಹವಾಲಾ ಹಣ ದಂಧೆ ಸೇರಿ ಅನೇಕ ಅಕ್ರಮ ಪ್ರಕರಣಗಳ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಟಾಲಿವುಡ್​ನ ಸುಮಾರು 40ಕ್ಕೂ ಹೆಚ್ಟು ಸೆಲೆಬ್ರೆಟಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ.

ಹಾಗೆಯೇ ಅಕ್ರಮ ವ್ಯಾಪಾರ ಮತ್ತು ಬೆಟ್ಟಿಂಗ್ ಆ್ಯಪ್​ಗಳಲ್ಲಿ ಭಾಗಿಯಾಗಿರುವ 'ಡಬ್ಬಾ ಟ್ರೇಡಿಂಗ್ ಅಪ್ಲಿಕೇಶನ್‌'ಗಳಾದ VMoney, VM ಟ್ರೇಡಿಂಗ್, ಸ್ಟ್ಯಾಂಡರ್ಡ್ ಟ್ರೇಡ್ಸ್ ಲಿಮಿಟೆಡ್, ಐಬುಲ್ ಕ್ಯಾಪಿಟಲ್ ಲಿಮಿಟೆಡ್, ಲೋಟಸ್‌ಬುಕ್, 11ಸ್ಟಾರ್ಸ್ ಮತ್ತು ಗೇಮ್‌ಬೆಟ್‌ಲೀಗ್‌ಗಳ ಹಣಕಾಸು ಮತ್ತು ಕಾರ್ಯಾಚರಣೆಯ ಬಗ್ಗೆ ಇಡಿ ಪರಿಶೀಲಿಸುತ್ತಿದೆ.  ಮುಂಬೈನ 4 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ದಾಖಲೆಯಿಲ್ಲದ 3.3 ಕೋಟಿ ರೂ. ನಗದು, ಐಷಾರಾಮಿ ಕೈಗಡಿಯಾರಗಳು, ಆಭರಣಗಳು, ವಿದೇಶಿ ಕರೆನ್ಸಿ ಹಾಗೂ ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net