

ಮಂಗಳೂರು: ಪಣಂಬೂರು ವೃತ್ತದಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರು ಮೂಲದ ಯುವಕ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಶ್ರೀಕಾಂತ್ (24) ಮೃತಪಟ್ಟವರು. ಪಣಂಬೂರು ಬೀಚ್‌ಗೆ ತೆರಳಿ ಹಿಂತಿರುಗುತ್ತಿದ್ದಾ ರಾತ್ರಿ 12.15ರ ವೇಳೆಗೆ ಪಣಂಬೂರು ಸರ್ಕಲ್‌ನಲ್ಲಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿದೆ. ವೇಗವಾಗಿದ್ದ ಬೈಕ್ ಸವಾರನನ್ನು ಸುಮಾರು 20 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಶ್ರೀಕಾಂತ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಬೆಂಗಳೂರಿನ ಶ್ರೀಕಾಂತ್ ಅವರು ಒಂದು ತಿಂಗಳ ಹಿಂದೆ ತನ್ನ ಸಹೋದರಿ ಮಂಗಳೂರಿನ ಬಿಜೈಯಲ್ಲಿ ವಾಸವಿರುವ ಮನೆಗೆ ಬಂದು ನೆಲೆಸಿದ್ದರು. ಉದ್ಯೋಗ ಹುಡುಕಾಟ ನಡೆಸುತ್ತಿದ್ದರು. ರಾತ್ರಿ 10 ಗಂಟೆ ವೇಳೆಗೆ ಯಮಹಾ ಬೈಕ್‌ನಲ್ಲಿ ಪಣಂಬೂರು ಬೀಚ್‌ಗೆ ಹೋಗಿದ್ದು, ಅಲ್ಲಿಂದ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.