

CM: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂ.4ರಂದು ನಡೆದ ಭೀಕರ ಕಾಲ್ತುಳಿತದಲ್ಲಿ 11 ಯುವ ಜನರ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಪತ್ರ ಬರೆಯುವ ಮೂಲಕ ಕಿಡಿ ಕಾರಿದ್ದಾರೆ.
ಕಳೆದ ಜೂ.4 ಕರ್ನಾಟಕದ ಇತಿಹಾಸದಲ್ಲಿ ಕರಾಳ ಅಧ್ಯಾಯದ ದಿನ. ಕ್ರಿಕೆಟ್ ಅಭಿಮಾನದ ಲಾಭ ಗಳಿಸುವ ಸ್ವಾರ್ಥದ ದುರಾಲೋಚನೆಯಿಂದ ಸಿಎಂ ಮತ್ತು ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ಬೇಜವಾಬ್ದಾರಿ ಹಾಗೂ ಹೊಣೆಗೇಡಿತನದ ನಿರ್ಧಾರದಿಂದಾಗಿ ಅಮಾಯಕ ಯುವಜೀವಗಳು ಬಲಿಯಾಗಿವೆ, ಜಮಾವಣೆಗೊಂಡಿದ್ದ ಸಾವಿರಾರು ಜನರು ನೋವು-ಸಂಕಷ್ಟವನ್ನು ಅನುಭವಿಸಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಜಯೇಂದ್ರ, '' ಇಡೀ ಘಟನೆಯಿಂದಾಗಿ ಈ ಕ್ಷಣಕ್ಕೂ ಇಡೀ ರಾಜ್ಯ ಮಮ್ಮಲ ಮರುಗುತ್ತಿದೆ. ಸಾವಿಗೀಡಾದ ಹನ್ನೊಂದು ಜನರ ಪೈಕಿ ಮನೋಜ್ ಎಂಬ ಯುವಕನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದ ಆತನ ಅಜ್ಜಿ ಆಹಾರ ತ್ಯಜಿಸಿ ಪ್ರಾಣ ಬಿಟ್ಟಿರುವ ಸುದ್ದಿ ನೋವು ತರಿಸಿದೆ. ದುರಂತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬ ಯಾವ ಪರಿಯಲ್ಲಿ ರೋದಿಸುತ್ತಿದೆ ಎಂಬುದನ್ನು ಮೃತ ದೇವೀರಮ್ಮನವರ ಸಾವು ಸಾಕ್ಷೀಕರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇಷ್ಟಾಗಿಯೂ ಸರ್ಕಾರಕ್ಕೂ ಈ ಘಟನೆಗೂ ಸಂಬಂಧವಿಲ್ಲ, ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಹೊರಲಾಗದು ಎಂಬ ಮುಖ್ಯಮಂತ್ರಿಗಳ ಹೇಳಿಕೆ ಪಲಾಯನವಾದ ಹಾಗೂ ನಿರ್ಲಜ್ಜತನದ ಹೊಣೆಗೇಡಿತನವನ್ನು ಪ್ರತಿಬಿಂಬಿಸುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವ ಭಂಡತನದ ನಡೆ ಪರಂಪರೆಯ ಕರ್ನಾಟಕದ ನೈತಿಕ ರಾಜಕಾರಣವನ್ನು ಅವಮಾನಿಸುತ್ತಿರುವ ಸಂಬಂಧ ಸಿಎಂಗೆ ಬಹಿರಂಗ ಪತ್ರ ಬರೆಯಲಾಗಿದೆ ಎಂದು ಪತ್ರಗಳನ್ನು ಹಂಚಿಕೊಂಡಿದ್ದಾರೆ.