ಅಪ್ಪುವಿನ ಬಹುದೊಡ್ಡ ಕನಸನ್ನು ಬಹಿರಂಗಪಡಿಸುತ್ತಲೇ ಭಾವುಕರಾದ ನಿರ್ದೇಶಕ ಚೇತನ್​ ಕುಮಾರ್​

Puneeth
Published on

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೂ, ಅಪ್ಪು ಇಲ್ಲ ಎಂಬುದನ್ನು ಇಂದಿಗೂ ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಆಗುತ್ತಿಲ್ಲ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ಪುನೀತ್​ರನ್ನು ನೆನೆಯುತ್ತಿದ್ದಾರೆ.

ಅಪ್ಪು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿದ ಕೊನೆಯ "ಜೇಮ್ಸ್​" ಚಿತ್ರದ ನಿರ್ದೇಶಕ ಚೇತನ್​ ಕುಮಾರ್​ ಕೂಡ ಪುನೀತ್​ ರಾಜ್​ಕುಮಾರ್​ ಅಭಿಮಾನಿ. ಅಪ್ಪು ಮೇಲಿನ ಅಭಿಮಾನಕ್ಕಾಗಿ ಕೈ ಮೇಲೆ ಪವರ್ ಸ್ಟಾರ್ ಅಂತ ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ಇಂದು ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಪುನೀತ್​ರನ್ನು ನೆನೆದು ಚೇತನ್​ ಗದ್ಗದಿತರಾದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪವರ್ ಸ್ಟಾರ್​ಗೆ ನಾನು ಅಭಿಮಾನಿ. ಪುನೀತ್​ಸರ್ ಗೆ ತುಂಬಾ ಕನಸುಗಳಿದ್ದವು. ಶಿವಣ್ಣಗೆ ನಿರ್ದೇಶನ ಮಾಡಬೇಕು ಅನ್ನೋದು ಅಪ್ಪು ಸರ್ ಕನಸಾಗಿತ್ತು. ಆದರೆ, ಆ ಭಗವಂತ ನಮ್ಮ ಅಪ್ಪು ಬಾಸ್​ನ ಕಿತ್ಕೊಂಡು ಬಿಟ್ಟ ಎಂದು ಚೇತನ್​ ಕಣ್ಣೀರಾಕಿದರು.

ಇದೇ ಸಂದರ್ಭದಲ್ಲಿ ಆಕಾಶ್, ಅರಸು ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಮಾತನಾಡಿ, ನಾನು ಬರೀ ನಿರ್ದೇಶಕ ಮಾತ್ರವಲ್ಲ ದೊಡ್ಮನೆ ಸದಸ್ಯ ಕೂಡ ಹೌದು. ಅಪ್ಪು ದೈಹಿಕವಾಗಿ ಅಗಲಿರ್ಬೋದು ಆದರೆ, ಅಪ್ಪು ನಮ್ಮ ಹೃದಯದಲ್ಲಿದ್ದಾರೆ. ಅವರ ಸಮಾಜಸೇವೆ ಎಂತಹದ್ದು ಅನ್ನೋದು ಅಗಲಿದ್ಮೇಲೆ ಗೊತ್ತಾಯಿತು. ನಾವು ಅವರ ಜೊತೆಗಿದ್ದರೂ ಅವರ ಯೋಚನೆ, ಯೋಜನೆಗಳ ಬಗ್ಗೆ ಗೊತ್ತಿರಲಿಲ್ಲ. ವಿಶ್ವಮಾನವ ಆಗೋದು ಅಂದರೆ ಸುಮ್ನೇನಾ ಹೇಳಿ ಎಂದು ಅಪ್ಪು ಅವರನ್ನು ಕೊಂಡಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net