

ಬೆಂಗಳೂರು: ವೈಟ್ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಇಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಓರ್ವ ಕಾನ್ಸ್ಟೇಬಲ್ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ಸ್ಪೆಕ್ಟರ್ ರೇಣುಕಾ, ಪಿಎಸ್ಐ ನವೀನ್ ಮತ್ತು ಗಣೇಶ್ ಹಾಗೂ ಕಾನ್ಸ್ಟೇಬಲ್ ಹೇಮಂತ್ ಅಮಾನತಾದ ಪೊಲೀಸ್ ಸಿಬ್ಬಂದಿ. ಎಸಿಬಿ ಸಲ್ಲಿಸಿದ ವರದಿ ಆಧರಿಸಿ ಡಿಜಿಪಿ ಪ್ರವೀಣ್ ಸೂದ್ ಅವರು ಇನ್ಸ್ಪೆಕ್ಟರ್ ರೆಣುಕಾರನ್ನು ಅಮಾನತು ಮಾಡಿದರೆ, ಇಬ್ಬರು ಪಿಎಸ್ಐ ಹಾಗೂ ಓರ್ವ ಕಾನ್ಸ್ಟೇಬಲ್ನನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
ಹೋಂ ಡೆಕೊರೇಷನ್ ವಿವಾದ ಬಗೆಹರಿಸುವ ನೆಪದಲ್ಲಿ ಉದ್ಯಮಿ ಬಳಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅಮಾನತಾದ ಪೊಲೀಸ್ ಸಿಬ್ಬಂದಿಯ ಮೇಲಿದೆ. ದೂರುದಾರ ಗೋಪಿನಾಥ್ ಎಂಬುವವರ ಬಳಿ ಹಣಕ್ಕೆ ಬೇಡಿಕೆ ಇಡುವಂತೆ ಇನ್ಸ್ಪೆಕ್ಟರ್ ರೇಣುಕಾ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಪಿಎಸ್ಐಗಳು 5 ಲಕ್ಷ ರೂ. ಹಣ ಪಡೆದಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಹಣ ಪಡೆದ ಆರೋಪ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇನ್ಸ್ಪೆಕ್ಟರ್ ರೇಣುಕಾ ಮನೆ ಮೇಲೆ ದಾಳಿ ಮಾಡಿದ್ದರು. ಕಳೆದ ಒಂದು ವರ್ಷದ ಹಿಂದೆ ರೇಣುಕಾ, ಪಿಎಸ್ಐಯಿಂದ ಇನ್ಸ್ಪೆಕ್ಟರ್ಗೆ ಬಡ್ತಿ ಪಡೆದಿದ್ದರು. ಈ ಹಿಂದೆಯೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ರೇಣುಕಾಗೆ ಎಚ್ಚರಿಕೆ ನೀಡಿದ್ದರು. ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ಬಂದ ಎರಡೇ ದಿನದಲ್ಲಿ ಲಂಚ ಪಡೆದ ಆರೋಪ ಹೊತ್ತು ರೇಣುಕಾ ಅಮಾನತಾಗಿದ್ದಾರೆ. (ದಿಗ್ವಿಜಯ ನ್ಯೂಸ್)