ಹುಬ್ಬಳ್ಳಿ : ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ವರ್ಗದವರಿಗೆ ಸಮಾನ ನ್ಯಾಯ ಒದಗಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ವಿರುದ್ಧದ ಕುತಂತ್ರಗಳನ್ನು ಸಹಿಸುವುದಿಲ್ಲ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಪದಾಧಿಕಾರಿಗಳು ಘೋಷಿಸಿದರು.
ಅ. 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಬೃಹತ್ ಜನಜಾಥಾದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಉತ್ತರ ಕರ್ನಾಟಕದ ವಿವಿಧೆಡೆಯಿಂದ ನೂರಾರು ಜನರು ನಗರಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಜನಜಾಥಾಕ್ಕೆ ಚಾಲನೆ ನೀಡಿ, ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬೀರಲಿಂಗ ಪೂಜಾರಿ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ವಿಲಾಸ ಕೊಪ್ಪಳ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ, ಘೋಷಣೆ ಕೂಗಿದರು. ಕಿತ್ತೂರು ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಿ, ನಂತರ ವಾಹನಗಳಲ್ಲಿ ಬೆಂಗಳೂರಿಗೆ ತೆರಳಿದರು.
ವಿವಿಧ ಜಿಲ್ಲೆಗಳ ಪದಾಧಿಕಾರಿಗಳಾದ ಬಾಬುಜಾನ್ ಮುದೋಳ, ಬಾಬುಗೌಡ ಪಾಟೀಲ, ರಾಮಣ್ಣ ಬೀದರ, ಪರಮೇಶ ಕಾಳಿ, ವೆಂಕಟೇಶ ಸಗಬಾಲ, ಚಂದ್ರಶೇಖರ ಮೆಣಸಿನಕಾಯಿ, ಸಂಗಪ್ಪ ಹಡಪದ, ಬಾಬಾಲಾಲ್ ಮಹಾತ, ಅಶೋಕ ದೊಡ್ಡಮನಿ ಹಾಗೂ ಇತರರು ಇದ್ದರು.