

ಬೆಂಗಳೂರು: ಡೆಲಿವರಿ ಬಾಯ್ ತನ್ನನ್ನು ಬಲವಂತವಾಗಿ ಅಪಾರ್ಟ್ಮೆಂಟ್ನ ಟೆರೇಸ್ಗೆ ಕರೆದೊಯ್ದ ಎಂದು 8 ವರ್ಷದ ಬಾಲಕಿ ದೂರಿದ ಬೆನ್ನಲ್ಲೇ ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಘಟನೆಯೂ ಸೋಮವಾರ ಸಂಜೆ ನಡೆದಿದ್ದು ಕಾಣೆಯಾದ ತಮ್ಮ ಮಗಳನ್ನು ಹುಡುಕುತ್ತಿದ್ದ ಪೋಷಕರಿಗೆ ಆಕೆ ಟೆರೇಸ್ನಲ್ಲಿರುವುದು ಕಂಡು ಬಂದಿದೆ. ಬಳಿಕ ಪ್ರಶ್ನಿಸಿದಾಗ ಡೆಲಿವರಿ ಬಾಯ್ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬಂದಿದಾಗಿ ದೂರಿದ್ದಳು. ಆತನಿಂದ ತಪ್ಪಿಸಿಕೊಳ್ಳಲು ಕೈ ಕಚ್ಚಿದ್ದಾಗಿ ಬಾಲಕಿ ಆಕೆಯ ಪೋಷಕರ ಬಳಿ ಹೇಳಿದ್ದಳು.
ತಮ್ಮ ಮಗಳ ಮಾತನ್ನು ನಂಬಿದ ಪೋಷಕರು ಬಳಿಕ ಅಪಾರ್ಟ್ಮೆಂಟ್ ಕಾಂಪೌಂಡ್ನಲ್ಲಿದ್ದ ಅಸ್ಸಾಂ ಮೂಲದ ಡೆಲಿವರ್ ಬಾಯ್ ಅಖಿಲ್ನನ್ನು ತಡೆದು ನೆರೆಹೊರೆಯವರಿಗೆ ನಡೆದ ವಿಚಾರವನ್ನು ತಿಳಿಸಿ ಯುವಕನ ಮೇಲೆ ಮನಸ್ಸೋಇಚ್ಛೆ ಹಲ್ಲೆ ನಡೆಸಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ದೊಡ್ಡ ಶಾಕ್ ಒಂದು ಕಾದಿತ್ತು.
ಮೊದಲಿಗೆ ಅಪಾರ್ಟ್ಮೆಂಟ್ಗೆ ಆಗಮಿಸಿದ ಪೊಲೀಸರು ಮದ್ಯಪ್ರವೇಶಿಸಿ ಡೆಲಿವರಿ ಬಾಯ್ನನ್ನು ರಕ್ಷಿಸಿ ಜೀಪ್ ಹತ್ತಿಸಿದ್ಧಾರೆ. ಬಳಿಕ ಪ್ರಕರಣದ ಕುರಿತು ಬಾಲಕಿಯ ತಂದೆ ಹಾಗೂ ನೆರೆಹೊರೆಯವರನ್ನು ವಿಚಾರಿಸಿ ಮಾಹಿತಿ ಕಲೆ ಹಾಕಿದ್ಧಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ನಿಜವಾದ ವಿಚಾರ ಹೊರಬಂದಿದ್ದು ಬಾಲಕಿಯ ಮುಖವಾಡ ಕಳಚಿ ಬಿದ್ದಿದೆ.
ಅಪಾರ್ಟ್ಮೆಂಟ್ನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬಾಲಕಿ ಒಬ್ಬಳೇ ಟೆರೇಸ್ಗೆ ತೆರಳಿರುವುದು ಬೆಳಕಿಗೆ ಬಂದಿದೆ. ಓದುವ ಸಮಯದಲ್ಲಿ ಆಟವಾಡಲು ತೆರಳಿದ ವಿಚಾರ ತನ್ನ ಪೋಷಕರಿಗೆ ತಿಳಿದರೆ ಎಲ್ಲಿ ಬೈಯುತ್ತಾರೆ ಎಂಬ ಭಯದಿಂದ ಡೆಲಿವರಿ ಬಾಯ್ ಬಲವಂತವಾಗಿ ಕರೆದುಕೊಂಡು ಬಂದಿದ್ದಾಗಿ ಸುಳ್ಳು ಹೇಳಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಬಳಿಕ ಡೆಲಿವರ್ ಬಾಯ್ಗೆ ನಡೆದ ವಿಚಾರದ ಬಗ್ಗೆ ಬಾಲಕಿಯ ಪೋಷಕರು ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ಧಾರೆ. ಪೊಲೀಸರು ಹಲ್ಲೆಗೊಳಗಾಗದ ಅಸ್ಸಾಂ ಮೂಲದ ಯುವಕನಿಗೆ ದೂರು ದಾಖಲಿಸುವಂತೆ ಹೇಳಿದ್ದರು. ಆದರೆ, ಆತ ಶೀಘ್ರದಲ್ಲೇ ಬೆಂಗಳೂರು ತೊರೆಯುತ್ತಿರುವ ಕಾರಣ ವಿಚಾರವನ್ನು ಇಲ್ಲಿಯೇ ಕೈ ಬಿಡುವುದಾಗಿ ಹೇಳಿ ದೂರನ್ನು ದಾಖಲಿಸಿಲ್ಲ ಎಂದು ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಡೆಲಿವರಿ ಬಾಯ್ ಅಖಿಲ್ ಪೊಲೀಸರು ಸರಿಯಾದ ಸಮಯಕ್ಕೆ ಬಂದು ಸಿಸಿಟಿವಿ ಪರಿಶೀಲನೆ ಮಾಡಿ ನನ್ನನ್ನು ಕಾಪಾಡಿದ್ದಾರೆ. ಒಂದು ವೇಳೆ ಆ ಅಪಾರ್ಟ್ಮೆಂಟ್ನಲ್ಲಿ ಸಿಸಿಟವಿ ಇರಲಿಲ್ಲ ಎಂದರೆ ಯಾರು ಬಂದರು ನನ್ನನ್ನು ಕಾಪಾಡಲು ಸಾಧ್ಯವಾಗುತ್ತಿರಲಿಲ್ಲ.
ತಮ್ಮ ಮಗಳು ಕಾಣೆಯಾದಾಗ ಪೋಷಕರಿಗೆ ಆತಂಕ ಆಗುವುದು ಸಹಜ. ಈ ವಿಚಾರದಲ್ಲೂ ಕೂಡ ಅದೇ ಆಗಿದೆ. ಪೊಲೀಸರು ಪ್ರತಿ ದೂರು ದಾಖಲಿಸುವಂತೆ ಹೇಳಿದ್ದರು. ಆದರೆ, ನಾನು ಶೀಘ್ರದಲ್ಲೇ ಬೆಂಗಳೂರು ತೊರೆಯುತ್ತಿರುವ ಕಾರಣ ಯಾವುದೇ ದೂರನ್ನು ದಾಖಲಿಸಿಲ್ಲ ಎಂದು ಹಲ್ಲೆಗೊಳಗಾದ ಅಸ್ಸಾಂ ಮೂಲದ ಡೆಲಿವರಿ ಬಾಯ್ ಅಖಿಲ್ ಘಟನೆಯ ಕುರಿತು ಪ್ರತಿಕ್ರಿಯಿಸಿದ್ಧಾರೆ.