

ಕೋಲ್ಕತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮದಲ್ಲಿನ ಕೊನೆಯ ದಿನದ ಚುನಾವಣ ಪ್ರಚಾರವು ನಾಟಕೀಯ ಅಂತ್ಯವನ್ನು ಪಡೆದುಕೊಂಡಿತು. ನಾಮಪತ್ರದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ನಿನ್ನೆ ಚುನಾವಣಾ ಪ್ರಚಾರದ ಕೊನೆಯ ದಿನ ವ್ಹೀಲ್ಚೇರ್ನಿಂದ ಎದ್ದು ನಿಲ್ಲುವ ಮೂಲಕ ಪ್ರಚಾರಕ್ಕೆ ತೆರೆ ಎಳೆದರು.
ಸಾಲು ಸಾಲು ಚುನಾವಣಾ ಸಮಾವೇಶಗಳ ಬಳಿಕ ಕೊನೆಯ ಹಂತದ ಪ್ರಚಾರದ ವೇಳೆ ಮಮತಾ ಅವರು ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುತ್ತಾರೆಂದು ಒತ್ತಾಯಿಸಲಾಯಿತು. ಈ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸುಬ್ರತ್ ಬಕ್ಷಿ ಮತ್ತು ಡೊಲಾ ಸೆನ್, ರಾಷ್ಟ್ರಗೀತೆ ವೇಳೆ ಮಮತಾ ಅವರು ಎದ್ದು ನಿಲ್ಲಲು ಸಹಾಯ ಮಾಡಿದರು.
ವ್ಹೀಲ್ಚೇರ್ನಿಂದ ಎದ್ದು ನಿಂತ ಮಮತಾ, ರಾಷ್ಟ್ರಗೀತೆ ವೇಳೆ ಒಂದೇ ಕಾಲಿನಲ್ಲಿ ನಿಂತಿದ್ದರು. ಈ ಮೂಲಕ ತಮ್ಮ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ತೆರೆ ಎಳೆದರು.
ಅಂದಹಾಗೆ ಮಾರ್ಚ್ 11ರಂದು ತಮ್ಮ ಕ್ಷೇತ್ರ ನಂದಿಗ್ರಾಮದಲ್ಲಿ ರೋಡ್ಶೋ ನಡೆಸುವ ವೇಳೆ ಮಮತಾ ಅವರು ಕಾಲಿಗೆ ನೋವು ಮಾಡಿಕೊಂಡಿದ್ದರು. ಆದರೆ, ಇದು ಭಾರತೀಯ ಜನತಾ ಪಾರ್ಟಿಯ ದುಷ್ಕೃತ್ಯ, ಅವರ ಗೂಂಡಾಗಳು ಮಾಡಿದ ಕೆಲಸ ಎಂದು ಟಿಎಂಸಿ ಮುಖ್ಯಸ್ಥ ಆರೋಪಿಸಿದ್ದರು. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನ ಬಾಗಿಲಿನಿಂದಾಗಿ ಈ ಅಚಾತುರ್ಯ ನಡೆಯಿತು ಎಂದು ಹೇಳಲಾಗಿದೆ.
ಏಪ್ರಿಲ್ 1ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಎರಡನೇ ಹಂತದ ಮತದಾನದಲ್ಲಿ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮವೂ ಸೇರಿದೆ. ಏಕೆಂದರೆ ಇದು ಹಾಲಿ ಮುಖ್ಯಮಂತ್ರಿ ಮಮತಾ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಇವರ ವಿರುದ್ಧ ಬಿಜೆಪಿಯಿಂದ ಸುವೆಂದು ಅಧಿಕಾರಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಇಬ್ಬರ ನಡುವೆ ಪ್ರವಲ ಪೈಪೋಟಿ ಇದೆ. ಸುವೆಂದು ಅಧಿಕಾರಿ ಅವರು ಈ ಹಿಂದೆ ಟಿಎಂಸಿಯಲ್ಲಿ ಮಮತಾ ಅವರ ನಂಬಿಕಸ್ಥರಾಗಿದ್ದರು. ಆದರೆ, ಪಕ್ಷ ತೊರೆದು ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ಹೀಗಾಗಿ ಈ ಚುನಾವಣೆ ಬಹಳ ಕುತೂಹಲ ಮೂಡಿಸಿದೆ.
ನಂದಿಗ್ರಾಮ್ ಚುನಾವಣಾ ಪ್ರಚಾರದ ಕೊನೆಯ ದಿನ, ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸಮಾವೇಶಗಳನ್ನು ನಡೆಸಿದರೆ, ಅವರ ಎದುರಾಳಿ ಸುವೆಂದು ಅಧಿಕಾರಿಯು, ಕೇಂದ್ರ ಗೃಹ ಸಚಿವ ಅಮಿತ್ ಷಾರೊಂದಿಗೆ ಕ್ಷೇತ್ರದ ರೋಡ್ ಶೋನಲ್ಲಿ ಭಾಗವಹಿಸಿದರು.
ಅಂದಹಾಗೆ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮನತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಗಿಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)