ಮಾಸಾಶನ ಸಿಗದೆ ಸಂಕಷ್ಟದಲ್ಲಿ ಫಲಾನುಭವಿ

6-3-25
Published on

ವಿಕ್ರಮ ನಾಡಿಗೇರ ಧಾರವಾಡ ರಾಜ್ಯದ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಮಾಜಿಕ ಭದ್ರತೆ ಯೋಜನೆ ಅಡಿ ಸರ್ಕಾರ ವಿವಿಧ ಮಾಸಾಶನಗಳನ್ನು ನೀಡುತ್ತಿದೆ. ಆದರೆ ಕಳೆದ 3 ತಿಂಗಳಿಂದ ಫಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಆಗದೆ ಜೀವನ ನಡೆಸಲು ಪರದಾಡುವಂತಾಗಿದೆ. ಸಾಮಾಜಿಕ ಭದ್ರತೆ ಯೋಜನೆ ಅಡಿ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಮಾಸಾಶನಗಳನ್ನು ನೀಡಲಾಗುತ್ತಿದೆ. ಆದರೆ ಸುಮಾರು 3 ತಿಂಗಳಿಂದ ಫಲಾನುಭವಿ ಖಾತೆಗೆ ಮಾಸಾಶನ ಜಮೆ ಮಾಡದಿರಲು ಕಾರಣ ಏನು? ಎಂಬುದೇ ಅಸ್ಪಷ್ಟ. ಹೀಗಾಗಿ ಫಲಾನುಭವಿಗಳು ತಹಸೀಲ್ದಾರ ಕಚೇರಿ, ಬ್ಯಾಂಕ್​ಗಳಿಗೆ ಓಡಾಡುವಂತಾಗಿದೆ. ಬಹುತೇಕ ಫಲಾನುಭವಿಗಳ ಪಿಂಚಣಿ ನವೆಂಬರ್​ವರೆಗೆ ಮಾತ್ರ ಜಮೆಯಾಗಿದೆ. ನಂತರ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಿಲ್ಲ. ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೆ ಪಿಂಚಣಿಗಳ ಪಾವತಿಗೂ ಆರ್ಥಿಕ ಸಮಸ್ಯೆ ಎದುರಾದಂತೆ ಕಾಣುತ್ತಿದೆ. ಇದರಿಂದ ಚಿಂತಿತರಾದ ಫಲಾನುಭವಿಗಳು ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆಯೇ? ಎಂಬ ಭಯದಲ್ಲಿ ತಹಸೀಲ್ದಾರ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿದ್ದಾರೆ. ಒಬ್ಬರೇ ಹಲವು ಕಡೆ ಯೋಜನೆಗಳ ಲಾಭ ಪಡೆಯುತ್ತಿರುವುದನ್ನು ಮನಗಂಡ ಸರ್ಕಾರ ಫಲಾನುಭವಿ ಬ್ಯಾಂಕ್​ ಖಾತೆಗೆ ಆಧಾರ ಲಿಂಕ್​ ಕಡ್ಡಾಯ ಮಾಡಿತ್ತು. ಆಗಲೂ ಫಲಾನುಭವಿಗಳು ಪಿಂಚಣಿ ಬಂದಿಲ್ಲ ಎಂದು ಕೆಲ ತಿಂಗಳು ಗೊಂದಲಕ್ಕೀಡಾಗಿದ್ದರು. ಆಗ ಅಧಿಕಾರಿಗಳು ಖಾತೆ ಪರಿಶೀಲಿಸಿ ಮಾಹಿತಿ ನೀಡಿ ಕಳುಹಿಸುತ್ತಿದ್ದರು. ಒಂದು ವೇಳೆ ಅನುದಾನ ಕೊರತೆಯಿಂದ ಸರ್ಕಾರವೇ ಪಿಂಚಣಿ ಪಾವತಿಯಲ್ಲಿ ವಿಳಂಬ ಮಾಡಿದ್ದರೆ, ಜನರ ಕಷ್ಟ ಪರಿಹರಿಸಲು ಸದಾ ಸಿದ್ಧ ಎನ್ನುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೊಡಿಸುವರೇ? ಎಂಬುದನ್ನು ಕಾದು ನೋಡಬೇಕಿದೆ. * ಯಾವ ಯೋಜನೆಗೆ ಎಷ್ಟು? ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ (64 ರಿಂದ 65 ವಯಸ್ಸು)ಯಲ್ಲಿ 600 ರೂ., ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ (65 ವರ್ಷ ಮೇಲ್ಪಟ್ಟು) 1200 ರೂ., ಸಂಧ್ಯಾ ಸುರಕ್ಷಾ 1200 ರೂ., ಮನಸ್ವಿನಿ 600 ರೂ., ವಿಧವಾ ಯೋಜನೆ 800 ರೂ., ಅಂಗವಿಕಲ (ಶೇ. 45) 800 ರೂ., ಅಂಗವಿಕಲ (ಶೇ. 75) 1400 ರೂ., ಅಂಗವಿಕಲ (ಮಾನಸಿಕ) 2000 ರೂ., ಫಾರ್ಮರ್​ ವಿಡೊ ಪೆನ್ಶನ್​ 2000 ರೂ. ಹಾಗೂ ಮೈತ್ರಿ ಯೋಜನೆಯಲ್ಲಿ 600 ರೂ. ಪಿಂಚಣಿ ನೀಡಲಾಗುತ್ತಿದೆ. * ಫಲಾನುಭವಿ ಮಾಹಿತಿ ಧಾರವಾಡದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯಲ್ಲಿ 11,197, ಸಂಧ್ಯಾ ಸುರಕ್ಷಾದಲ್ಲಿ 21,903, ವಿಧವಾ ವೇತನ 15,168, ಅಂಗವಿಕಲ 21,694, ಮೈತ್ರಿ 8, ಮನಸ್ವಿನಿ 2228, ರೈತ ಆತ್ಮಹತ್ಯೆ ಯೋಜನೆ (ಫಾರ್ಮರ್​ ವಿಡೊ ಪೆನ್ಶನ್​) 65 ಸೇರಿ ಒಟ್ಟು 72,263 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ.

ಫಲಾನುಭವಿಗಳ ಖಾತೆಗೆ ಪಿಂಚಣಿ ಜಮೆ ಆಗುತ್ತಿದೆ. ಕೆಲವರ ಬ್ಯಾಂಕ್​ ಖಾತೆಗಳು ಎನ್​ಪಿಸಿಐ ಆಗಿಲ್ಲ. ಹೀಗಾಗಿ ಜಮೆ ಆಗಿಲ್ಲ. ಅಂತಹವರಿಗೆ ಎನ್​ಪಿಸಿಐ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಸುಮಾರು 30 ಜನರಿಗೆ ಆ ಸಮಸ್ಯೆ ಎದುರಾಗಿತ್ತು. ಅವರಲ್ಲಿ ಇನ್ನು 5-6 ಜನ ಮಾತ್ರ ಉಳಿದಿದ್ದಾರೆ. ಎನ್​ಪಿಸಿಐ ಆದ ಬಳಿಕ ಪಿಂಚಣಿ ಜಮೆ ಆಗಲಿದೆ. * ಡಾ. ಡಿ.ಎಚ್​. ಹೂಗಾರ, ತಹಸೀಲ್ದಾರ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net