

ಬಂಟ್ವಾಳ: ಸೇತುವೆ, ರಸ್ತೆಗಳಲ್ಲಿ ಹಲವು ಕಾರಣಕ್ಕೆ ದೊಡ್ಡ ವಾಹನ ಸಂಚಾರ ನಿಷೇಧಿಸಿ ಕಬ್ಬಿಣದ ಕಮಾನುಗಳನ್ನು ಅಳವಡಿಸಲಾಗಿದ್ದು, ಆದರೆ ಇದೀಗ ಒಂದಷ್ಟು ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಬ್ಬಿಣ ಕಮಾನುಗಳ ಮೇಲಿನ ಗಾರ್ಡ್‌ಗಳನ್ನು ಮೇಲಕ್ಕೆ ಬಗ್ಗಿಸಿ(ಬೆಂಡ್ ಮಾಡಿ) ನಿಷೇಧಿತ ವಾಹನಗಳು ಕೂಡ ಸಂಚರಿಸುವುದಕ್ಕೆ ಅನುಕೂಲವಾಗುವಂತೆ ಮಾಡುವ ತಂತ್ರವೊಂದು ಜೋರಾಗಿ ನಡೆಯುತ್ತಿದ್ದು, ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕಿದೆ.
ಪಾಣೆಮಂಗಳೂರು ಹಳೇ ಉಕ್ಕಿನ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ ಎನ್ನುವ ಕಾರಣಕ್ಕೆ ಸಣ್ಣ ವಾಹನಗಳು ಮಾತ್ರ ಸಂಚರಿಸಬೇಕು ಎಂದು ಸೇತುವೆಯ ಎರಡೂ ಬದಿ ಕಬ್ಬಿಣದ ಕಮಾನುಗಳನ್ನು ಅಳವಡಿಸಲಾಗಿದೆ. ಇದರಿಂದ ಸರಕು ಸಾಗಿಸುವ ಪಿಕಪ್ ಸೇರಿದಂತೆ ಒಂದಷ್ಟು ಗೂಡ್ಸ್ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಆದರೆ ತಮ್ಮ ವಾಹನಗಳು ಸೇತುವೆಯ ಮೂಲಕ ಸಂಚರಿಸುವಂತೆ ಮಾಡಲು ಒಂದಷ್ಟು ಗೂಡ್ಸ್ ವಾಹನ ಚಾಲಕರು ಉಪಾಯವನ್ನು ಕಂಡು ಹಿಡಿದು ವಾಹನ ಪಾಸ್ ಮಾಡುತ್ತಿದ್ದಾರೆ. ಸೇತುವೆಯ ಮೇಲೆ ಹಾಕಿರುವ ಕಬ್ಬಿಣದ ಗಾರ್ಡನ್ನು ಮೇಲಕ್ಕೆ ಬೆಂಡ್ ಮಾಡಿ ವಾಹನ ಸಾಗುವುದಕ್ಕೆ ಅನುಕೂಲ ಮಾಡುತ್ತಿದ್ದಾರೆ.
ದೊಡ್ಡ ವಾಹನಗಳು ಸಾಗದಂತೆ ಅಳವಡಿಸಿರುವ ಕಬ್ಬಿಣದ ಗಾರ್ಡ್‌ಗಳನ್ನು ಹೇಗೆ ಬೆಂಡ್ ಮಾಡುತ್ತಾರೆ ಎಂಬ ಸಂಶಯ ಸಾಕಷ್ಟು ಮಂದಿಯಲ್ಲಿರಬಹುದು. ಸಾಕಷ್ಟು ಉಪಾಯಗಳ ಮೂಲಕ ಅದನ್ನು ಬೆಂಡ್ ಮಾಡುವುದಕ್ಕೆ ಯತ್ನಿಸಿ ಚಾಲಕರು ಯಶಸ್ವಿಯಾಗಿದ್ದಾರೆ. ಸೆ.25ರಂದು ಮಧ್ಯಾಹ್ನ 2ರ ಸುಮಾರಿಗೆ ಪಾಣೆಮಂಗಳೂರು ಸೇತುವೆಯಲ್ಲಿ ಪಿಕಪ್ ಚಾಲಕನೋರ್ವ ಗಾರ್ಡ್ ಬೆಂಡ್ ಮಾಡುವ ಕ್ರಮ ವಿಶೇಷವಾಗಿತ್ತು. ಪ್ರಸ್ತುತ ಪಿಕಪ್ ವಾಹನಗಳಿಗೆ ಸರಕುಗಳನ್ನು ಅನ್‌ಲೋಡ್ ಮಾಡುವುದಕ್ಕೆ ಟಿಪ್ಪರ್ ಮಾದರಿಯಲ್ಲಿ ಲಿಫ್ಟ್ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ಲಿಫ್ಟ್ ವ್ಯವಸ್ಥೆಯನ್ನು ಬಳಸಿ ಚಾಲಕ ಗಾರ್ಡ್ ಬೆಂಡ್ ಮಾಡುತ್ತಿರುವುದು ಕಂಡುಬಂದಿದೆ. ಪಿಕಪ್ ವಾಹನವನ್ನು ಗಾರ್ಡ್ ಬಳಿ ನಿಲ್ಲಿಸಿ ಹಿಂದಿನ ಬಕೆಟ್‌ನ ಮೇಲಿನ ಭಾಗಕ್ಕೆ ಜಾಕ್ ಕೊಟ್ಟು ಗಾರ್ಡ್ ಜಾಮ್ ಮಾಡಲಾಗುತ್ತದೆ. ಬಳಿಕ ಬಕೆಟನ್ನು ಲಿಫ್ಟ್ ಮಾಡಿ ಗಾರ್ಡ್ ಬೆಂಡ್ ಮಾಡುವ ಪ್ರಯತ್ನ ಮಾಡುವುದು ಕಂಡುಬಂದಿದೆ.
ಬ್ರಹ್ಮರಕೂಟ್ಲು ಟೋಲ್‌ಗೇಟ್‌ಲ್ಲಿ ವಾಹನಗಳು ಟೋಲ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ಸಾಗುವುದನ್ನು ತಪ್ಪಿಸಲು ಸರ್ವೀಸ್ ರಸ್ತೆಯಲ್ಲಿ ದೊಡ್ಡ ವಾಹನಗಳು ಸಂಚರಿಸದಂತೆ ಕಬ್ಬಿಣದ ಗಾರ್ಡ್ ಅಳವಡಿಸಲಾಗಿದೆ. ಈ ಗಾರ್ಡನ್ನು ಕೂಡ ಒಂದಷ್ಟು ಗೂಡ್ಸ್ ವಾಹನ ಚಾಲಕರೇ ಬೆಂಡ್ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಇಂತಹ ದಂಧೆಯನ್ನು ತಡೆಯುವ ದೃಷ್ಟಿಯಿಂದ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಬಂಟ್ವಾಳ ಪುರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.