ಸೋರುತ್ತಿರುವ ವಾಣಿಜ್ಯ ಸಂಕೀರ್ಣ : ಅಧಿಕಾರಿಗಳೊಂದಿಗೆ ಚರ್ಚೆ : ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ ಅಧ್ಯಕ್ಷತೆಯಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಂತೆಕಟ್ಟೆ ಮಹಾತ್ಮ ಗಾಂಧಿ ವಾಣಿಜ್ಯ ಸಂಕೀರ್ಣ ಸೋರುತ್ತಿದ್ದು ಅದನ್ನು ಕಳೆದ ಸಭೆಯಲ್ಲಿ ಗುತ್ತಿಗೆದಾರರೇ ದುರಸ್ತಿಗೊಳಿಸಬೇಕು ಎಂದು ಶಾಸಕರು ಸೂಚಿಸಿದ್ದಾರೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸದಸ್ಯ ಜಗದೀಶ್ ತಿಳಿಸಿದರು. ಇಂಜಿನಿಯರ್ ಮಹಾವೀರ ಅರಿಗ ಉತ್ತರಿಸಿ, ಈ ಬಗ್ಗೆ ನಿರ್ಮಿತಿ ಸಂಸ್ಥೆಗೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ ಎಂದಾಗ ಅಸಮಾಧಾನ ವ್ಯಕ್ತವಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಜಯಾನಂದ ಗೌಡ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಮಾಹಿತಿ ಅಗತ್ಯ: ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಚರಂಡಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಪಪಂನಿಂದ ಪತ್ರ ಬರೆದಿದ್ದೇವೆ. ಅದಕ್ಕೆ ಸೂಕ್ತ ಸ್ಪಂದನೆ ನೀಡಿದ್ದಾರೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು. ಪಪಂ ಸಭೆಗೆ ರಾ.ಹೆ ಇಲಾಖೆ ಅಧಿಕಾರಿಗಳು ಬರಬೇಕು. ಮುಂದೆ ಹೆದ್ದಾರಿ ಆಗುವಾಗ ಬಹಳಷ್ಟು ಅಂಗಡಿಗಳು ತೆರವಾಗಲಿದೆ. ಈ ಬಗ್ಗೆ ಜನಸಾಮಾನ್ಯರಿಗೆ ಸೂಕ್ತ ಮಾಹಿತಿ ನೀಡಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಪಟ್ಟಣದಲ್ಲಿ ಕಾಮಗಾರಿ ಸಮಯದಲ್ಲಿ ಅಧಿಕಾರಿಗಳನ್ನು ಕರೆಸಿ ಮಾಹಿತಿ ನೀಡುವಂತೆ ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.

ಸಿಸಿ ಚರಂಡಿಗಳಿಗೆ ಫಾಗಿಂಗ್: ಬೆಳ್ತಂಗಡಿ ಪಟ್ಟಣದಲ್ಲಿ 4 ಡೆಂಘೆ ಪ್ರಕರಣಗಳಿವೆ. ತಾಲೂಕಿನಲ್ಲಿ 39 ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಸೋಮನಾಥ್ ಮಾಹಿತಿ ನೀಡಿದರು. ಪಟ್ಟಣದ ಸುದೆಮುಗೇರು, ರೆಂಕೆದುಗುತ್ತು ಸಹಿತ ಇತರ ಎಲ್ಲ ಸಿಸಿ ಚರಂಡಿಗಳಲ್ಲಿ ತಕ್ಷಣವೇ ಫಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಅಧ್ಯಕ್ಷರು ಸೂಚಿಸಿದರು.

ಉಪಾಧ್ಯಕ್ಷೆ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಪ.ಪಂ. ಮುಖ್ಯಾಧಿಕಾರಿ ರಾಜೇಶ್ ಕೆ., ಇಂಜಿನಿಯರ್ ಮಹಾವೀರ ಆರಿಗ ಉಪಸ್ಥಿತರಿದ್ದರು.

ಪಪಂನಲ್ಲೇ ಸೇವೆ

ನಗರದೊಳಗೆ ಮುಡಾದ ಸಮಸ್ಯೆ, ಮತ್ತೊಂದೆಡೆ ಇ ಖಾತೆ, ಬಿ ಖಾತೆ ಮಾಡಿಸಲು ಆದೇಶಿಸಿ ಜನಸಾಮಾನ್ಯರು ಮತ್ತೆ ಒದ್ದಾಡುವಂತಾಗಿದೆ. ಕರ್ನಾಟಕ ಒನ್‌ನಲ್ಲಿ ಮೊತ್ತ ಕಟ್ಟಿ ಖಾತೆ ಪಡೆಯುವ ಅವಕಾಶವಿದೆ. ಅದಕ್ಕಿಂತ ಪಪಂನಲ್ಲೇ ವ್ಯವಸ್ಥೆ ಕಲ್ಪಿಸಿ ಂಬ ಆಗ್ರಹ ವ್ಯಕ್ತವಾಯಿತು. ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ಮಹಾನಗರದಲ್ಲಿ ಕರ್ನಾಟಕ ಒನ್ ಹೆಚ್ಚಿದೆ. ನಮ್ಮ ನಗರದಲ್ಲಿ ಸೀಮಿತ ಇರುವುದರಿಂದ ಪಪಂನಲ್ಲೇ ನಾವು ಅರ್ಜಿ ಸ್ವೀಕರಿಸಿ ಸೇವೆ ನೀಡುತ್ತೇವೆ. ಹಾಗಾಗಿ ಅರ್ಜಿದಾರರು ನೇರವಾಗಿ ಪಪಂಗೇ ಬರಬಹುದು ಎಂದು ಸಭೆಯಲ್ಲಿ ಅಧಿಕೃತವಾಗಿ ತಿಳಿಸಿದರು.

ಮರದ ರೆಂಬೆ ತೆರವಿಗೆ ಸೂಚನೆ

ಸುದೆಮುಗೇರಿನಲ್ಲಿ ಮರದ ರೆಂಬೆ ತೆರವುಗೊಳಿಸದೆ ಕಳೆದ ವಾರ ವಿದ್ಯುತ್ ತಂತಿಗೆ ಬಿದ್ದು ಅಲ್ಲಿನ ಜನ ರಾತ್ರಿಯಿಡೀ ಕತ್ತಲಲ್ಲಿ ಕುಳಿತುಕೊಳ್ಳುವಂತಾಗಿದೆ. ಮಳೆಗಾಲಕ್ಕೂ ಮುನ್ನ ತೆರವುಗೊಳಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಯಿತು. ಗುರುವಾರದಂದು ಅರಣ್ಯ ಇಲಾಖೆ ತೆರವಿಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಅವರು ಪ್ರತಿಕ್ರಿಯಿಸಿದಿದ್ದಲ್ಲಿ ತಹಸೀಲ್ದಾರ್‌ಗೆ ದೂರು ನೀಡಿ ಎಂದು ಮುಖ್ಯಾಧಿಕಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net