ಬಳ್ಳಾರಿ ; ಕೇಂದ್ರದ ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ರಾಜ್ಯದಲ್ಲಿ ಮೊದಲ ಹಂತದಲ್ಲಿಯೇ ಹುಬ್ಬಳಿ ವಿಭಾಗದ ನೈಋತ್ಯ ರೈಲ್ವೆಯ ಐದು ರೈಲು ನಿಲ್ದಾಣಗಳು ಮೇ.22ರಂದು ಉದ್ಘಾಟನೆಯಾಗಲಿವೆ.
ಕಳೆದ ಹಲವು ವರ್ಷಗಳಿಂದ ರಾಜ್ಯದ ಹಲವು ರೈಲು ನಿಲ್ದಾಣಗಳು ಅಭಿವೃದ್ಧಿಯಾಗದೆ ಮರೀಚಿಕೆಯಾಗಿದ್ದ ಮನಗಂಡ ಕೇಂದ್ರ ಸರ್ಕಾರವು 2023ರಲ್ಲಿ ದೇಶಾದ್ಯಂತ 1275 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿಗೆ ಚಾಲನೆ ನೀಡಿತು. ಅದರಂತೆ ರಾಜ್ಯದ 61 ನಿಲ್ದಾಣಗಳನ್ನು ನಾಲ್ಕು ವಲಯಗಳಲ್ಲಿ ಅಭಿವೃದ್ಧಿಗಾಗಿ ವಿಭಜಿಸಿತು. ಈ ನಿಲ್ದಾಣಗಳಲ್ಲಿ ಪುನರಾಭಿವೃದ್ಧಿ, ಮೂಲಸೌಕರ್ಯ ಮತ್ತು ಆಧುನೀಕರಿಸುವ ಜತೆಗೆ ಮೇಲ್ದರ್ಜೆಗೇರಿಸುವ ಗುರಿ ನೀಡಿತು.
ರಾಜ್ಯದ ನಾಲ್ಕು ವಿಭಾಗಳಲ್ಲಿ ಹುಬ್ಬಳ್ಳಿ ವಿಭಾಗದ ನೈಋತ್ಯ ವಲಯದಿಂದ ಧಾರವಾಡ, ಮುನಿರಬಾದ್, ಗದಗ, ಬಾಗಲಕೋಟೆ ಹಾಗೂ ಗೋಕಾಕ್ ರಸ್ತೆಯ ನಿಲ್ದಾಣ ಸೇರಿ ಒಟ್ಟು ಐದು ರೈಲು ನಿಲ್ದಾಣಗಳನ್ನು ಒಟ್ಟಾರೆ 91 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ವಿಡೀಯೋ ಕಾನ್ಫರೆನ್ಸ್ ಮೂಲಕ ಮೇ 22 ರಂದು ಉದ್ಘಾಟಿಸಲಿದ್ದಾರೆ.
ಏನೆಲ್ಲ ಸೌಲಭ್ಯ : ಸ್ಥಳಿಯ ಉತ್ಪನಗಳ ಬೇಡಿಕೆಗಾಗಿ ಮಳಿಗೆಗಳು, 12 ಅಡಿಯ ಫುಟ್ವೇರ್ ಬ್ರೀಡ್ಜ್, ನೂತನ ಫ್ಲಾಟ್ಫಾರ್ಮ್ ಹಾಗೂ ಶೆಲ್ಟರ್ಗಳ ಅಳವಡಿಕೆ, ಆಧುನಿಕ ಪೀಠೋಪಕರಣಗಳು, ಸುಸ್ಸಜ್ಜಿತ ಕಾಯುವ ಕೋಣೆ ಹಾಗೂ ಶೌಚಾಲಯ ಕೊಠಡಿಗಳು, ಸ್ವಚ್ಛತೆಗೆ ಅದ್ಯತೆ, ನೂತನ ತಂತ್ರಜ್ಞಾನ ಆಧಾರಿತ ಕಟ್ಟಡಗಳು, ರೂಪ್ ವೇ ಹಾಗೂ ಪಿಒಪಿ ಅಳವಡಿಕೆ, ಅಗಲವಾದ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ, ಕಲೆ ಹಾಗೂ ವಾಸ್ತುಶಿಲ್ಪಕ್ಕೆ ಮಹತ್ವ ನೀಡಿದ್ದು ಕಟ್ಟಡದ ಗೋಡೆಗಳ ಮೇಲೆ ಸ್ಥಳೀಯ ಹಾಗೂ ಪ್ರಖ್ಯಾತ ಭಿತ್ತಿಚಿತ್ರಗಳು, ಉಚಿತ ವೈಫೈ ಸೇರಿದಂತೆ ಪ್ರಯಾಣಿಕರ ಸಾರಿಗೆಗೆ ಅನುಕೂಲವಾಗಲೆಂದು ನಗರಗಳಿಗೆ ಸಂಪರ್ಕ ಕಲ್ಪಿಸಿದೆ. ಕೆಲ ನಿಲ್ದಾಣಗಳನ್ನು ನಗರ ಕೇಂದ್ರಗಳ ರೈಲು ನಿಲ್ದಾಣಗಳಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದಲ್ಲದೆ, ಧಾರವಾಡ, ಗದಗ ಹಾಗೂ ಬಾಗಲಕೋಟೆ ರೈಲು ನಿಲ್ದಾಣಗಳಿಗೆ ಹಲವು ವರ್ಷಗಳಿಂದ ಒಂದೇ ಪ್ರವೇಶದ್ವಾರವಿದ್ದು, ಈ ಅಮೃತ ಭಾರತ ಯೋಜನೆಯಡಿ ಈಗ ಮೂರು ನಿಲ್ದಾಣಗಳಿಗೆ ಎರಡನೇ ಪ್ರವೇಶ ದ್ವಾರ ತೆರೆಯಲಾಗಿದೆ. ಎಲ್ಲ ನಿಲ್ದಾಣಗಳಲ್ಲಿ ಅಂಗವಿಕಲರಿಗೆ ಸುಲಭವಾಗಿ ಪ್ರವೇಶಿಸಲು ಲಿಫ್ಟ್ ಅಳವಡಿಸಲಾಗಿದೆ.
ಎರಡನೇ ಹಂತ : ಈ ವಲಯದಿಂದನೇ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಗುಲ್ಬರ್ಗ ಹಾಗೂ ಯಾದಗಿರಿ ರೈಲು ನಿಲ್ದಾಣಗಳನ್ನು ಅಭಿವೃದ್ದಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಎಲ್ಲ ರೈಲು ನಿಲ್ದಾಣಗಳಲ್ಲಿ ಕಾಮಗಾರಿ ಆರಂಭವಾಗಿದ್ದು ಇನ್ನೂ ಕೆಲ ಸಣ್ಣಪ್ರಮಾಣದ ಕಾಮಗಾರಿ ಬಾಕಿ ಉಳಿದಿದೆ. ಅಮೃತ ಭಾರತ ಯೋಜನೆಯಡಿ 17 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯ ರೈಲು ನಿಲ್ದಾಣದ ಬಣ್ಣ ಬಳೆಯುವುದು ಸೇರಿದಂತೆ ಬಹುತೇಕ ನಿಲ್ದಾಣದ ನವೀಕರಣ ಪೂರ್ಣಗೊಂಡಿದೆ. ಉಳಿದ ರೈಲು ನಿಲ್ದಾಣಗಳ ಕಾಮಗಾರಿ ಉಳಿದಿರುವುದಿರಂದ ಎರಡನೇ ಹಂತದಲ್ಲಿ ಉದ್ಘಾಟನೆಯಾಗಲಿವೆ ಎಂಬುದಾಗಿ ರೈಲ್ವೆ ಅಧಿಕಾರಿ ತಿಳಿಸಿದರು.
ಕೋಟ್... ಕೇಂದ್ರ ಸರ್ಕಾರ ಅಮೃತ ಭಾರತ ಯೋಜನೆಯಡಿ ಮೊದಲ ಹಂತದ ಐದು ರೈಲು ನಿಲ್ದಾಣಗಳು ಮೇ.22 ರಂದು ಉದ್ಘಾಟನೆಯಾಗಲಿವೆ. ಇನ್ನೂ ಉಳಿದ ರೈಲು ನಿಲ್ದಾಣಗಳ ಬಗ್ಗೆ ಮೇಲಧಿಕಾರಿಗಳ ನಿರ್ದೇಶನದಂತೆ ನವೀಕರಣ ಮಾಡಲಾಗುತ್ತಿದೆ. ಅಭಿವೃದ್ಧಿ ಪೂರ್ಣಗೊಂಡ ಬಳಿಕ ಎರಡನೇ ಹಂತದಲ್ಲಿ ಉದ್ಘಾಟಿಸುವುದರ ಬಗ್ಗೆ ನಿರ್ಧಾರಿಸಲಾಗುವುದು.
- ರಾಜಕುಮಾರ, ಪಿಆರ್ಒ, ಹುಬ್ಬಳ್ಳಿ ವಿಭಾಗ ನೈಋತ್ಯ ವಲಯ.