

ಬಾಲಿವುಡ್ನಲ್ಲಿ ‘ಬೆಲ್ ಬಾಟಂ’ ಹೆಸರಿನ ಸಿನಿಮಾ ಘೋಷಣೆಯಾಗುತ್ತಿದ್ದಂತೆ, ಕನ್ನಡದಲ್ಲಿ ತೆರೆಕಂಡಿದ್ದ ರಿಷಭ್ ಶೆಟ್ಟಿ ಅಭಿನಯದ ಅದೇ ಹೆಸರಿನ ಸಿನಿಮಾದ ರೀಮೇಕ್ ಇರಬಹುದಾ ಎಂದು ಸಾಕಷ್ಟು ಮಂದಿ ಮಾತನಾಡಿಕೊಂಡಿದ್ದರು. ಬಳಿಕ ಅದೇ ಬೇರೆ, ಇದೇ ಬೇರೆ ಎಂದು ಗೊತ್ತಾಗುತ್ತಿದ್ದಂತೆ, ಈ ವಿಷಯವನ್ನು ಕೈಬಿಟ್ಟಿದ್ದರು. ಇದೀಗ ಅದೇ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ನಾಯಕಿಯ ಆಯ್ಕೆಯಾಗಿದೆ.
ಈಗಾಗಲೇ ಬಾಲಿವುಡ್ ಸೇರಿದಂತೆ ಬೇರೆಬೇರೆ ಭಾಷೆಯ ಚಿತ್ರರಂಗಗಳಲ್ಲೂ ನಟಿಸಿರುವ ವಾಣಿ ಕಪೂರ್, ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ವಾರ್’ ಚಿತ್ರದಲ್ಲಿ ಹೃತಿಕ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ವಾಣಿ, ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜತೆಗೆ ನಟಿಸುತ್ತಿದ್ದಾರೆ. 1980ರ ಕಾಲಘಟದಲ್ಲಿ ನಡೆಯುವ ಕಥೆ ಇದಾಗಿದ್ದು, ಡಿಫರೆಂಟ್ ಲುಕ್ನಲ್ಲಿ ವಾಣಿ ಕಾಣಿಸಿಕೊಳ್ಳುತ್ತಿದ್ದಾರೆ.
ರಂಜಿತ್ ಎಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪೂಜಾ ಎಂಟರ್ಟೈನ್ವೆುಂಟ್ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಅಸೀಮ್ ಅರೋರಾ, ಪರ್ವೆಜ್ ಶೇಖ್ ಚಿತ್ರಕ್ಕೆ ಕಥೆ ಬರೆದಿದ್ದು, ಕರೊನಾ ಹಾವಳಿ ಕಡಿಮೆ ಆಗುತ್ತಿದ್ದಂತೆಯೇ ಶೂಟಿಂಗ್ ಶುರು ಮಾಡಿಕೊಳ್ಳಲಿದೆ ಚಿತ್ರತಂಡ. 2021ರ ಏಪ್ರಿಲ್ ಎರಡರಂದು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜನ್ಸೀಸ್)