

ಬೆಳಗಾವಿ: ಅತಿಸಾರ ರೋಗಗಳ ಪತ್ತೆ ಹಾಗೂ ನಿವಾರಣಾ ಪ್ರಕ್ರಿಯೆಯಲ್ಲಿ ಸಂಶೋಧನಾ ಪ್ರವೃತ್ತಿ ಹೆಚ್ಚಾಗಬೇಕು. ಆಗ ಮಾತ್ರ ವೈದ್ಯರು ರೋಗದ ಮೂಲ, ಕಾರಣ ಹಾಗೂ ಪರಿಣಾಮಗಳನ್ನು ಸ್ಪಷ್ಟವಾಗಿ ತಿಳಿಯಲು ಸಾಧ್ಯವಾಗುತ್ತದೆ ಎಂದು ಐಸಿಎಂಆರ್– ಎನ್ಐಟಿಎಂ ನಿರ್ದೇಶಕ ಡಾ.ಸುಬರ್ಣ ರಾಯ್ ಸಲಹೆ ನೀಡಿದರು.
ಇಲ್ಲಿನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)– ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಸಿನ್ (ಎನ್ಐಟಿಎಂ) ಸಭಾಂಗಣದಲ್ಲಿ ಶನಿವಾರ, ‘ತೀವ್ರವಾದ ಅತಿಸಾರ ರೋಗಗಳ ಗುರುತಿಸುವಲ್ಲಿ ರೋಗ ಕಣ್ಗಾವಲು ಪ್ರಯೋಗಾಲಯದ ಪಾತ್ರ’ ಕುರಿತು ಕರ್ನಾಟಕ ಮತ್ತು ಗೋವಾ ರಾಜ್ಯ ಸರ್ಕಾರದ ಆರೋಗ್ಯ ಅಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗ, ಕಲ್ಯಾಣ ಕರ್ನಾಟಕ ಭಾಗ ಹಾಗೂ ಗೋವಾ ರಾಜ್ಯಗಳಲ್ಲಿ ಅತಿಸಾರ ರೋಗಗಳು ತೀವ್ರತರವಾಗಿ ಕಾಡುತ್ತಿವೆ. ಮೇಲಿಂದ ಮೇಲೆ ಇಂಥ ಸಮಸ್ಯೆ ಉಲ್ಬಣಿಸುತ್ತಿದೆ. ಹೀಗಾಗಿ, ಈ ಭಾಗದ ಸರ್ಕಾರಿ ವೈದ್ಯಾಧಿಕಾರಿಗಳು, ವೈದ್ಯರಿಗೆ ಈ ತರಬೇತಿ ಆಯೋಜಿಸಲಾಗಿದೆ. ಐಸಿಎಂಆರ್ನಿಂದ ರಾಜ್ಯದ ವೈದ್ಯಕೀಯ ವ್ಯವಸ್ಥೆ ಸುಧಾರಣೆ ಹಾಗೂ ರೋತ ಪತ್ತೆ, ರೋಗ ತಡೆಗೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ರಾಜ್ಯ ಸರ್ಕಾರದ ಅಧಿಕಾರಿಗಳು ನಮ್ಮ ಸಂಶೋಧಕರು, ವಿಜ್ಞಾನಿಗಳೊಂದಿಗೆ ಸಂವಹನ ಬೆಳೆಸಿಕೊಳ್ಳಬೇಕು’ ಎಂದೂ ಹೇಳಿದರು.
ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ್ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಶೋಭಾ ಮೂಲಿಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ ಸಂವಾದದಲ್ಲಿ ಪಾಲ್ಗೊಂಡರು.
ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದ 14 ಜಿಲ್ಲೆಗಳ 13 ಜಿಲ್ಲಾ ಕಣ್ಗಾವಲು ಅಧಿಕಾರಿಗಳು, 8 ಐಡಿಎಸ್ಪಿ ಅಧಿಕಾರಿಗಳು, 18 ಮೈಕ್ರೋಬಯಾಲಜಿಸ್ಟ್ಗಳು ಮತ್ತು 11 ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಗೋವಾದ ಆರೋಗ್ಯ ಅಧಿಕಾರಿಗಳು ಸೇರಿದಂತೆ 50 ತಜ್ಞರು ಭಾಗವಹಿಸಿದ್ದರು.