ಭಿಕ್ಷಾಟನೆ ವಿರುದ್ಧ ಪೊಲೀಸರ ಡ್ರೈವ್: ಸುಮನಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ 37 ಭಿಕ್ಷುಕರ ರವಾನೆ

Begging
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಿಕ್ಷುಕರ ವಿರುದ್ಧ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಪೊಲೀಸರು 37 ನಿರ್ಗತಿಕರನ್ನು ರಕ್ಷಣೆ ಮಾಡಿ ನಿರಾಶ್ರಿತರ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ. ಪಾಟೀಲ್ ಮಾರ್ಗದರ್ಶನದಲ್ಲಿ ಬ್ಯಾಟರಾಯನಪುರ, ಚಂದ್ರಾಲೇಔಟ್, ಕೆಂಗೇರಿ, ವಿಜಯನಗರ, ಕೆ.ಆರ್.ಮಾರ್ಕೆಟ್ ಮತ್ತು ಉಪ್ಪಾರಪೇಟೆ ಪೊಲೀಸರು ಬುಧವಾರ ತಮ್ಮ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು.

ಕೆಂಪೇಗೌಡ ಬಸ್ ನಿಲ್ದಾಣ, ಅಣ್ಣಮ್ಮ ದೇವಸ್ಥಾನ, ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿದಂತೆ ದೇವಸ್ಥಾನ, ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಭಿಕ್ಷೆ ಬೇಡುತ್ತಿದ್ದ ವೃದ್ಧರು, ಯುವಕರು, ಮಹಿಳೆಯರು, ಮಕ್ಕಳನ್ನು ರಕ್ಷಣೆ ಮಾಡಿ ಎಲ್ಲರ ಮಾಹಿತಿ ಪಡೆದು ರಾಜ್ಯ ಸರ್ಕಾರದ ಸುಮನಹಳ್ಳಿ ನಿರಾಶ್ರಿತರ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಇತ್ತೀಚೆಗೆ ಭಿಕ್ಷಾಟನೆ ಮತ್ತೆ ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳನ್ನು ಎತ್ತಿಕೊಂಡು ವಾಹನ ಸವಾರರು/ ಚಾಲಕರಿಗೆ ತೋರಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ದೇವಸ್ಥಾನ ಮುಂಭಾಗ ಮತ್ತು ಬಸ್ ನಿಲ್ದಾಣದಲ್ಲಿ ವೃದ್ಧರು ಮತ್ತು ಯುವಕರು ಸಹ ಭಿಕ್ಷೆ ಬೇಡುವರು ಇದ್ದಾರೆ. ಇವರು ನಿಜವಾದ ಭಿಕ್ಷುಕರೇ ಅಥವಾ ಹಣ ವಸೂಲಿ ಮಾಡಲು ಭಿಕ್ಷುಕರ ಸೋಗಿನಲ್ಲಿ ಬಂದಿದ್ದಾರ ಶಂಕೆ ಇದೆ.

ಭಿಕ್ಷಾಟನೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿರುವ ಅನುಮಾನಗಳು ವ್ಯಕ್ತವಾಗಿವೆ. ಭಿಕ್ಷಕರನ್ನೇ ಮುಂದಿಟ್ಟುಕೊಂಡು ಸಿಗ್ನಲ್, ದೇವಸ್ಥಾನ, ಬಸ್ ನಿಲ್ದಾನದಲ್ಲಿ ಭಿಕ್ಷೆ ಬೇಡಲು ಬಿಟ್ಟು ಮತ್ತೆ ರಾತ್ರಿ ವೇಳೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುವ ತಂಡಗಳೇ ಬೇರೆ ಇವೆ.

ಇದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದೆ.ನಿಜವಾದ ಭಿಕ್ಷುಕರು ಅಥವಾ ನಿರ್ಗತಿಕರು ಇದ್ದರೇ ಅಂತವರಿಗೆ ಸರ್ಕಾರದ ನಿರ್ಗತಿಕರ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗುತ್ತದೆ. ಉಳಿದಂತೆ ಭಿಕ್ಷಾಟಣೆ ದಂಧೆ ನಡೆಸುವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ನಿರ್ಗತಿಕರನ್ನು ಬಿಟ್ಟು ಭಿಕ್ಷಾಟನೆ ಮಾಡಿಸುತ್ತಿರುವರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಎಂ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಭಿಕ್ಷಕರ ಪೂರ್ವಪರ ತನಿಖೆ : ಮಹಿಳೆಯರು ಸಣ್ಣ ಮಕ್ಕಳನ್ನು ಮಡಿಲುಗಳಲ್ಲಿ ಬಚ್ಚಿಟ್ಟುಕೊಂಡು ಟ್ರಾಫಿಕ್ ಸಿಗ್ನಲ್ ಮತ್ತು ದೇವಸ್ಥಾನ ಬಳಿ ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿದೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಭಿಕ್ಷಾಟನೆಯಿಂದ ಬೇರೆ ಬೇರೆ ಅಪರಾಧ ಪ್ರಕರಣಗಳಿಗೂ ದಾರಿ ಆಗಲಿದೆ. ಭಿಕ್ಷಾಟಣೆಗೆ ಬಳಸಿದ ಮಕ್ಕಳು ದೊಡ್ಡವರಾದ ಮೇಲೆ ದುಡಿಮೆ ಇಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳು ಇರುತ್ತವೆ. ಸಲೂಷನ್, ವೈಟ್ನರ್, ಪೆಟ್ರೋಲ್ ಇನ್ನೀತ್ತರ ರಾಸಾಯಿನಿಕವನ್ನು ಸಣ್ಣ ಮಕ್ಕಳಿಗೆ ವಾಸನೆ ಕುಡಿಸಿ ಪ್ರಜ್ಞೆ ತಪ್ಪಿಸಿರುತ್ತಾರೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಆನಂತರ ಮಾದಕ ದ್ರವ್ಯ ವ್ಯಸನಿಗಳಾಗುತ್ತಾರೆ. ಅದಕ್ಕಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಭಿಕ್ಷಾಟನೆ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಿರ್ಗತಿಕರು, ಭಿಕ್ಷುಕರ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಾಣದ ಕೈಗಳು ಇದ್ದರೇ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಭಿಕ್ಷುಕರ ವಿರುದ್ಧ ಕಾರ್ಯಾಚರಣೆ ಮುಂದುವರಿಯಲಿದೆ. | ಸಂಜೀವ್ ಎಂ. ಪಾಟೀಲ್- ಪಶ್ಚಿಮ ವಿಭಾಗ ಡಿಸಿಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net