

ಚಂಡೀಗಡ: ಪಂಜಾಬ್ ನ ಕಪುರ್ತಲದ ಮಹೇದು ಗ್ರಾಮದ ಲಾ ಗೇಟ್ ಪ್ರದೇಶದಲ್ಲಿ ಗೋಮಾಂಸ ಮಾರಾಟ(Beef Sale) ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಗೋಸಂರಕ್ಷಣಾ ತಂಡದ ಸದಸ್ಯರು, ಪೊಲೀಸರಿಗೆ ದೂರು ನೀಡಿದ್ದು, ಸತನಂಪುರ ಪೊಲೀಸರು ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಅಂಗಡಿಯನ್ನು ಸೀಲ್ ಮಾಡಿದ್ದಾರೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಬಳಿಯ ಲಾ ಗೇಟ್ ಪ್ರದೇಶದಲ್ಲಿ ಸೋಶಿಯಲ್ ಟ್ರೆಂಡ್ಸ್ ಎಂಬ ಅಂಗಡಿಯಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಗೋ ರಕ್ಷಾ ದಳದ ಸದಸ್ಯರು ಅಂಗಡಿಯವನಿಂದ ಮಾಂಸ ಖರೀದಿಸಿದಾಗ ಅವರು ಯಾವುದೇ ಬಿಲ್ ಪಾವತಿಸಿಲ್ಲ. ಈ ಅಂಗಡಿಯಿಂದ 25 ರಿಂದ 30 ಬಾಕ್ಸ್‌ಗಳಲ್ಲಿ ಹಸುವಿನ ಫೋಟೋ ಹಾಕಿ ಮಾಂಸವನ್ನು ಮಾರಾಟ ಮಾಡಿದ್ದುದು ಕಂಡುಬಂದಿತ್ತು.
ಭಾರತದಲ್ಲಿ ಗೋಮಾಂಸ ಮಾರಾಟಕ್ಕೆ ನಿಷೇಧವಿದೆ ಎಂದು ಗೋರಕ್ಷಾ ದಳದ ಸದಸ್ಯರು ಹೇಳಿದ್ದಾರೆ. ಇದರ ಹೊರತಾಗಿಯೂ, ಗೋಮಾಂಸವನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿತ್ತು. ಈ ಪ್ರದೇಶದಲ್ಲಿ ಇರುವ ಅಂಗಡಿಗಳು ಮತ್ತು ಪಿಜಿಗಳನ್ನು ಪೊಲೀಸರು ಕಾಲಕಾಲಕ್ಕೆ ಪರಿಶೀಲಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಫಗ್ವಾರಾ ಎಸ್ಪಿ ಗುರುಪ್ರೀತ್ ಕೌರ್ ಭಟ್ಟಿ ಖಚಿತಪಡಿಸಿದ್ದಾರೆ. ಆರೋಪಿಗಳ ವಿಚಾರಣೆ ಜತೆಗೆ ಎಲ್ಲ ಅಂಶಗಳಿಂದಲೂ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದರು. ಅಂಗಡಿಯಿಂದ 25-30 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಂಗಡಿ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.