More

    ಬೇಡಿಕೆ ಈಡೇರಿಸದ್ದಕ್ಕೆ ವಾಹನಕ್ಕೆ ತಡೆ: ಕಂಪನಿ ಆಡಳಿತ ಮಂಡಳಿ ವಿರುದ್ಧ ಮುಂದುವರಿದ ಕಾರ್ಮಿಕರ ಹೋರಾಟ

    ನೆಲಮಂಗಲ: ಕಾರ್ಮಿಕರ ಬೇಡಿಕೆ ಈಡೇರಿಸದ ಕಂಪನಿ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದ ಕಾರ್ಮಿಕರು ಗುರುವಾರ ತಾಲೂಕಿನ ಬಸವನಹಳ್ಳಿ ಗ್ರಾಮ ಪಂಚಾಯಿತಿಯ ಬಹುರಾಷ್ಟ್ರೀಯ ಎಬಿಬಿ ಇಂಡಿಯಾ ಲಿಮಿಟೆಡ್ ಕಂಪನಿಗೆ ತೆರಳುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು.

    ಕಾರ್ಮಿಕರ ಬೇಡಿಕೆ ಈಡೇರಿಸಲು ಉಪಕಾರ್ಮಿಕ ಆಯುಕ್ತರೂ ಆದೇಶ ಮಾಡಿದ್ದರೂ ಪಾಲನೆ ಮಾಡದಿರುವುದು, ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ನಡೆದ ರಾಜೀ ಸಂಧಾನಗಳಿಗೆ ಸ್ಪಂದಿಸಿ ಕಾರ್ಮಿಕರ ಬೇಡಿಕೆ ಈಡೇರಿಸಲು ಮುಂದಾಗದಿರುವ ಕಂಪನಿ ವಿರುದ್ಧ ಸಿಟ್ಟಿಗೆದ್ದ ಕಾರ್ಮಿಕರು ಗುರುವಾರ ಬೆಳಗ್ಗೆ ಕಂಪನಿಗೆ ತೆರಳುತ್ತಿದ್ದ ಆಡಳಿತ ಮಂಡಳಿ ಅಧಿಕಾರಿ, ಸಿಬ್ಬಂದಿ ಕಾಯಂ, ಗುತ್ತಿಗೆ ಕಾರ್ಮಿಕರ ವಾಹನ ತಡೆದು ಪ್ರತಿಭಟಿಸಿದರು.

    ಕಂಪನಿಯಲ್ಲಿನ ಕಾರ್ಮಿಕರು ಒಟ್ಟಾಗಿ ಸೇರಿ ಸಿಐಟಿಯು ನೇತೃತ್ವದ ಸಂಘಟನೆ ರಚನೆ ಮಾಡಿಕೊಂಡಿದ್ದನ್ನೇ ಮುಂದಿಟ್ಟುಕೊಂಡು ಕಂಪನಿ ಕೆಲ ಕಾರ್ಮಿಕರನ್ನು ಏಕಾಏಕಿ ವಜಾಗೊಳಿಸಿರುವುದು ಮತ್ತು ಕೆಲ ಕಾರ್ಮಿಕರನ್ನು ಅಕ್ರಮ ವರ್ಗಾವಣೆ ಮಾಡಿತ್ತು. ಇದನ್ನು ಖಂಡಿಸಿದ ಕಾರ್ಮಿಕರು 3 ತಿಂಗಳಿಂದಲೂ ಹೋರಾಟ ಮಾಡುತ್ತಿದ್ದು, ಸ್ಥಳೀಯ ಕಾರ್ಖಾನೆಯಲ್ಲಿ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದರು.

    ಕಾರ್ಮಿಕರ ಶ್ರಮದಿಂದ ಲಾಭಗಳಿಸಿರುವ ಕಂಪನಿ ಆಡಳಿತ ಮಂಡಳಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಮೊಂಡುತನ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ ತಿರುಮಲಾಚಾರಿ ತಿಳಿಸಿದರು.

    ಕಂಪನಿ ಆರಂಭದ ಸಮಯದಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಕಾರ್ಮಿಕರು, ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟುಹಿಡಿದರು. ಮದ್ಯೆ ಪ್ರವೇಶಿಸಿದ ಗ್ರಾಮಾಂತರ ಪೊಲೀಸರು ಪ್ರತಿಭಟನಾನಿರತ ಕಾರ್ಮಿಕರ ಮನವೊಲಿಸಿ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ ಬಳಿಕ ರಸ್ತೆಯನ್ನು ಬಿಟ್ಟು ಶಾಂತಿಯುತ ಹೋರಾಟ ಮುಂದುವರಿಸಿದ್ದಾರೆ.

    ಸಾಮೂಹಿಕ ರಜೆ ಘೋಷಣೆ: ಕಂಪನಿ ಆಡಳಿತ ಮಂಡಳಿ ಕೆಲಸಕ್ಕೆ ಬಂದಿದ್ದ ಎಲ್ಲ ಕಾರ್ಮಿಕರಿಗೂ ಸಾಮೂಹಿಕ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಅಧಿಕಾರಿಗಳು ಸಿಬ್ಬಂದಿ, ಕಾರ್ಮಿಕರು ಮನೆಗೆ ತೆರಳಿದರು.
    ಸಿಐಟಿಯುನ ಬೆಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ಪ್ರತಾಪ್‌ಸಿಂಹ, ತಾಲೂಕು ಪ್ರಧಾನ ಕಾರ್ಯದರ್ಶಿ ಅಂಜುಂ, ಖಜಾಂಚಿ ಮೊಹಮ್ಮದ್ ಸಾದೀಕ್, ಸಂಘಟನಾ ಕಾರ್ಯದರ್ಶಿ ಗಂಗಾಧರ್, ಕಾರ್ಮಿಕ ಮುಖಂಡರಾದ ಬಸವರಾಜು, ವೀರಣ್ಣ, ವಿನಯ್, ಕಿರಣ್, ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts