ಯಾವ ಮಣ್ಣಿನಲ್ಲಿ ಜನನಕ್ಕೆ ಬಂದು, ಯಾವ ಮಣ್ಣಿನ ನೀರಿನಲ್ಲಿ ಮಿಂದು, ಯಾವ ಮಣ್ಣಿನ ಕೂಳನ್ನು ತಿಂದು, ಯಾವ ಮಣ್ಣಿನ ಕೃಪೆಯಿಂದ ಬಾಳಿ ಬೆಳೆದು ಬಂದು, ಮತ್ತೆ ಯಾವ ಮಣ್ಣಲ್ಲೇ ಮಣ್ಣಾಗಲಿದ್ದೇವೆಯೋ ಒಂದು ದಿನದಂದು, ಅಂತಹ ನಮ್ಮ ಜನ್ಮಭೂಮಿಯ ಮೇಲೆ ಇರುವ ಪ್ರೀತಿ, ‘ದೇಶಾಭಿಮಾನ’ವೆಂದು ಕರೆಯಲ್ಪಟ್ಟರೆ, ಪರಿಸರದ ಮೇಲಿನ ಪ್ರೀತಿ ‘ಪರಿಸರ ಪ್ರೇಮ’ವೆಂದೆನಿಸುತ್ತದೆ. ನಮ್ಮ ನಾಡು-ನುಡಿಯ ಮೇಲೆ, ಅಭಿಮಾನ ಉಕ್ಕಿ ಹರಿಯಬೇಕಾದರೆ, ಮೊದಲು ಅದನ್ನು ನಾವು ಪ್ರೀತಿಸಬೇಕಾಗುತ್ತದೆ. ಅಂತೆಯೇ ಪ್ರಾಣಿಗಳ ಮೇಲಣ ಪ್ರೀತಿ, ‘ಪ್ರಾಣಿದಯೆ’ಯ ರೂಪದಲ್ಲಿ ವ್ಯಕ್ತವಾಗುತ್ತದೆ. ಶಿಷ್ಯರಿಗೆ ತಮ್ಮ ಗುರುಗಳ ಮೇಲಿರುವ ಪ್ರೀತಿ ಗೌರವಕ್ಕೆ ಕಾರಣವಾದರೆ, ಗುರುಗಳಿಗೆ ತಮ್ಮ ಶಿಷ್ಯರ ಮೇಲಿರುವ ಪ್ರೀತಿಯೇ ‘ಅಭಿಮಾನ’. ಆತ್ಮೀಯತೆಗೆ ಕಾರಣವಾಗುತ್ತದೆ. ಕಷ್ಟದಲ್ಲಿರುವವರ ಮೇಲೆ ಇರುವ ಪ್ರೀತಿ ‘ಸಹಾನುಭೂತಿ’ ಎಂದೆನಿಸಿದರೆ, ದೀನ ದಲಿತರ ಬಡವರ ಬಗ್ಗೆ ಇರುವ ಪ್ರೀತಿಯೇ ‘ಕರುಣೆ, ಕಳಕಳಿ, ಕನಿಕರ’ಗಳಿಗೆ ಕಾರಣವಾಗುತ್ತದೆ.