ಕೋವಿಡ್-26, ಕೋವಿಡ್-32ಗೆ ಸಿದ್ಧರಾಗಿ!; ಅಮೆರಿಕ ತಜ್ಞರ ಎಚ್ಚರಿಕೆ

Nation Lead
ಅಹಮದಾಬಾದ್​ನಲ್ಲಿ ಲಸಿಕೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ.
Published on

ವಾಷಿಂಗ್ಟನ್/ನವದೆಹಲಿ: ಸದ್ಯ ಜಗತ್ತನ್ನೇ ತಲ್ಲಣಕ್ಕೆ ಒಳಪಡಿಸಿರುವ ಕೋವಿಡ್ 19 ಮೂಲ ಪತ್ತೆ ಮಾಡಿ ಅದನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಕೋವಿಡ್-26, ಕೋವಿಡ್-32 ಮುಂತಾದವನ್ನು ಎದುರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾದೀತು ಎಂದು ಅಮೆರಿಕದ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೋವಿಡ್ 19 ವೈರಸ್​ಗಳು ಲ್ಯಾಬ್​ನಲ್ಲಿ ಅಭಿವೃದ್ಧಿ ಪಡಿಸಿದವು ಎಂಬ ವಾದವನ್ನು ಈ ಹೇಳಿಕೆಗಳು ಪುಷ್ಟೀಕರಿ ಸುತ್ತವೆ. ಇದರೊಂದಿಗೆ, ಕೋವಿಡ್ 19 ವೈರಾಣುವಿನ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ)ಯ ಮೇಲೆ ಜಾಗತಿಕ ಒತ್ತಡ ಹೆಚ್ಚಾಗಿದೆ. ಇದೇ ರೀತಿ, ಲ್ಯಾಬ್ (ವುಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ) ನಿಂದ ವೈರಸ್ ಸೋರಿಕೆಯಾದ ವಾದವನ್ನು ಅಲ್ಲಗಳೆಯುವಂತಹ ಯಾವುದೇ ಸಾಕ್ಷ್ಯವನ್ನು ಚೀನಾ ಇದು ವರೆಗೂ ಬಹಿರಂಗಪಡಿಸಿಲ್ಲ. ವೈರಸ್ ಮೂಲ ಪತ್ತೆಗಾಗಿ ವನ್ಯಜೀವಿಗಳ ಮಾದರಿಯನ್ನು ಪರಿಶೀಲಿಸಿದಾಗಲೂ ತಾಳೆಯಾಗುವಂತಹ ಫಲಿತಾಂಶ ಸಿಕ್ಕಿಲ್ಲ. ಆದ್ದರಿಂದ ಮೂಲ ಪತ್ತೆ ಅನಿವಾರ್ಯ ಎಂದು ಫೈಜರ್ ಕಂಪನಿಯ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಸ್ಕಾಟ್ ಗೊಟ್ಲಿಯೆಬ್ ಹೇಳಿದ್ದಾರೆ. ಸ್ಕಾಟ್ ಈ ಹಿಂದೆ ಟ್ರಂಪ್ ಆಳ್ವಿಕೆ ಇದ್ದಾಗ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್​ನಲ್ಲಿ ಕಮಿಷನರ್ ಆಗಿದ್ದರು.

ಬ್ರಿಟನ್​ನಲ್ಲಿ 3ನೇ ಅಲೆ?: ಬ್ರಿಟನ್​ನಲ್ಲಿ ಜೂನ್ 21ರಿಂದ ಲಾಕ್​ಡೌನ್ ಸಡಿಲಗೊಳಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಆದರೆ, ಇದನ್ನು ಕೆಲವು ವಾರಗಳ ಮಟ್ಟಿಗೆ ಮುಂದೂಡುವಂತೆ ಭಾರತೀಯ ಮೂಲದ ಪ್ರಸಿದ್ಧ ವಿಜ್ಞಾನಿ ಕೇಂಬ್ರಿಜ್ ಯೂನಿವರ್ಸಿಟಿಯ ಪ್ರೊಫೆಸರ್ ರವಿ ಗುಪ್ತಾ ಎಚ್ಚರಿಸಿದ್ದಾರೆ. ಗುಪ್ತಾ ಅವರು ಬ್ರಿಟನ್ ಸರ್ಕಾರದ ನ್ಯೂ ಆಂಡ್ ಎಮರ್ಜಿಂಗ್ ರೆಸ್ಪಿರೇಟರಿ ವೈರಸ್ ಥ್ರೆಟ್ಸ್ ಅಡ್ವೈಸರಿ ಗ್ರೂಪ್​ನ ಸದಸ್ಯರು. ದೇಶದಲ್ಲಿ ಹೊಸ ಕೇಸ್​ಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಆದರೆ, ಲಾಕ್​ಡೌನ್ ತೆರವುಗೊಳಿಸಿದರೆ ಕೋವಿಡ್ 19ನ ಬಿ.1.617 ಮಾದರಿಯ ವೈರಾಣು ಇನ್ನಷ್ಟು ಕೇಸ್​ಗಳಿಗೆ ಕಾರಣವಾಗಬಹುದು ಎಂದು ಗುಪ್ತಾ ಎಚ್ಚರಿಸಿದ್ದಾರೆ. ಬ್ರಿಟನ್​ನಲ್ಲಿ ಭಾನುವಾರ 3,000ಕ್ಕೂ ಹೆಚ್ಚು ಹೊಸ ಕೇಸ್​ಗಳು ವರದಿಯಾಗಿವೆ. ಒಟ್ಟು ಕೇಸ್ 44,99,939 ಮತ್ತು ಮರಣ ಪ್ರಮಾಣ 1,28,043 ಇದೆ.

ವೈರಸ್ ಮೂಲದ ತನಿಖೆಗೆ ಆಗ್ರಹ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮತ್ತು ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್​ಡೆರ್ನ್ ಅವರು ಉಭಯ ದೇಶಗಳ ಹಲವು ಭಿನ್ನಮತಗಳನ್ನು ಕೋವಿಡ್ 19 ಮೂಲ ಪತ್ತೆ ಮಾಡಬೇಕೆನ್ನುವ ವಿಚಾರದಲ್ಲಿ ಕೈಬಿಟ್ಟು ಒಮ್ಮತದ ನಿಲುವು ತೋರಿಸಿದ್ದಾರೆ. ಕೋವಿಡ್ 19 ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ. ಅದರ ಮೂಲ ಪತ್ತೆಗೆ ನಿಖರ, ಪಾರದರ್ಶಕ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ. ಇದಕ್ಕೆ ಚೀನಾ, ಎರಡೂ ದೇಶಗಳ ನಾಯಕರದ್ದು ಬೇಜವಾಬ್ದಾರಿ ಹೇಳಿಕೆ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ಶವಸಂಸ್ಕಾರ ವಿಚಾರ, ಕೋರ್ಟ್ ಗರಂ: ಸೋಂಕಿಗೆ ಒಳಗಾಗಿ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿಲ್ಲ. ಇದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಅಗತ್ಯ ನೆರವನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಶವವನ್ನು ನದಿಗೆ ಎಸೆಯುತ್ತಿರುವ ಚಿತ್ರವನ್ನು ಮಾಧ್ಯಮದಲ್ಲಿ ನೋಡಿದೆ ಎಂದು ಕೋರ್ಟ್ ಹೇಳಿದೆ.

ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ: ದೇಶೀಯ ಕಂಪನಿಗಳು ಲಸಿಕೆ ತಯಾರಿಕೆಯಲ್ಲಿ ತೊಡಗಿದ್ದು ಅಲ್ಲಿ ಉತ್ಪಾದನೆಯಾಗುತ್ತಿರುವ ಲಸಿಕೆಯನ್ನು ಪಡೆದು ವರ್ಷಾಂತ್ಯದೊಳಗೆ ನಾಗರಿಕರಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ, ಎಲ್​ಎನ್ ರಾವ್, ಎಸ್​ಆರ್ ಭಟ್ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಚಾರ ತಿಳಿಸಿದರು.

ಲಸಿಕೆ ನೀತಿಗೆ ಸುಪ್ರೀಂ ತರಾಟೆ: ಕೇಂದ್ರ ಸರ್ಕಾರದ ಲಸಿಕೆ ನೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಲಸಿಕೆ ಪಡೆಯಲು ರಾಜ್ಯಗಳು ಜಾಗತಿಕ ಟೆಂಡರ್ ಕರೆಯಬೇಕಾದ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿತು. ಸಂವಿಧಾನದ ಅನುಚ್ಛೇದ 1ರ ಪ್ರಕಾರ ಭಾರತ ರಾಜ್ಯಗಳ ಒಕ್ಕೂಟ. ಅಂದರೆ ಇಲ್ಲಿ ಫೆಡರಲ್ ಆಳ್ವಿಕೆ ಇರುವಂಥದ್ದು. ಕೇಂದ್ರ ಸರ್ಕಾರವೇ ಜಾಗತಿಕವಾಗಿ ಲಸಿಕೆ ಸಂಗ್ರಹಿಸಿ ರಾಜ್ಯಗಳಿಗೂ ವಿತರಿಸಬೇಕು. ಬೃಹತ್ ಪ್ರಮಾಣದಲ್ಲಿ ಲಸಿಕೆ ಸಂಗ್ರಹಿಸುವಾಗ ವೆಚ್ಚವೂ ಕಡಿಮೆಯಾಗುವುದಲ್ಲವೇ? ರಾಜ್ಯಗಳ ಮೇಲೂ ಆ ಹೊರೆಯನ್ನೇಕೆ ಹೊರಿಸಬೇಕು ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

  • ಮೇ ತಿಂಗಳಲ್ಲಿ 6.5 ಕೋಟಿ ಡೋಸ್ ಲಸಿಕೆ ಉತ್ಪಾದಿ ಸಲಾಗಿದೆ. ಜೂನ್​ನಲ್ಲಿ 10 ಕೋಟಿ ಡೋಸ್ ಲಸಿಕೆ ಉತ್ಪಾದಿಸಿ ನೀಡಲಾಗುವುದು ಎಂದ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ.
  • ಲಸಿಕೆ ಮಿಶ್ರಣ ಮತ್ತು ಕೋವಿಶೀಲ್ಡ್ ಸಿಂಗಲ್ ಡೋಸ್​ನ ಪರಿಣಾಮ ಕಾರಿತ್ವದ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಎರಡು ಅಥವಾ ಎರಡೂವರೆ ತಿಂಗಳ ಒಳಗಾಗಿ ಇದರ ಅಧ್ಯಯನ ಪೂರ್ಣಗೊಂಡರೆ ಫಲಿತಾಂಶ ನೋಡಿಕೊಂಡು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.

ಡಿಜಿಟಲ್ ಕಂದಕ: ಲಸಿಕೆ ಪಡೆಯುವುದಕ್ಕೆ ‘ಕೋವಿನ್’ ಆಪ್ ಮೂಲಕ ನೋಂದಾಯಿಸಲು ಅವಕಾಶ ಮಾಡಿಕೊಡಲಾಗಿದೆ. ನಗರದಲ್ಲಿರುವವರೇನೋ ಆಪ್ ಮೂಲಕ ನೋಂದಾ ಯಿಸಿ ಲಸಿಕೆ ಪಡೆಯಬಹುದು. ಆದರೆ, ಗ್ರಾಮೀಣ ಭಾಗದ ಜನರು ಅನೇಕ ಸಮಸ್ಯೆ, ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರೇನು ಮಾಡಬೇಕು? ಈ ಡಿಜಿಟಲ್ ಕಂದಕಕ್ಕೇನು ಪರಿಹಾರ? ಇದೇನಾ ಕೇಂದ್ರ ಸರ್ಕಾರದ ನೀತಿ ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಮಿದುಳಿನಲ್ಲಿ ಕಪ್ಪು ಶಿಲೀಂಧ್ರ: ಮಧ್ಯಪ್ರದೇಶದ ಇಂದೋರ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೈಕಿ ಕನಿಷ್ಠ ಶೇಕಡ 15ರಷ್ಟು ರೋಗಿಗಳ ಮಿದುಳಿನಲ್ಲಿ ಕಪು್ಪ ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 368 ರೋಗಿಗಳು ಕಪು್ಪ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 55 ರೋಗಿಗಳ ಮಿದುಳಿನಲ್ಲಿ ಕಪು್ಪ ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಇದನ್ನು ಸಿಟಿ ಸ್ಕಾ್ಯನ್ ಮತ್ತು ಎಂಆರ್​ಐ ಮೂಲಕ ಖಚಿತಪಡಿಸಿಕೊಳ್ಳಲಾಗಿದೆ ಎಂದು ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ರಾಕೇಶ್ ಗುಪ್ತಾ ತಿಳಿಸಿದ್ದಾರೆ.

50 ದಿನಗಳಲ್ಲೇ ಕನಿಷ್ಠ ಕೇಸ್: ದೇಶದಲ್ಲಿ ಕಳೆದ 50 ದಿನಗಳ ಅವಧಿಯಲ್ಲೇ ಹೊಸ ಕೇಸ್​ಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ.ಸೋಮವಾರದ ಅಂಕಿಅಂಶ ಪ್ರಕಾರ, ಪ್ರಕಾರ ಹೊಸ ಕೇಸ್​ಗಳ ಸಂಖ್ಯೆ 1.53 ಲಕ್ಷಕ್ಕೆ ಇಳಿಕೆಯಾಗಿದೆ. 24 ಗಂಟೆ ಅವಧಿಯ ಮರಣ ಪ್ರಮಾಣ 3,150ರೊಳಕ್ಕೆ ಇಳಿದಿದೆ. ಸತತ 18ನೇ ದಿನವೂ ಚೇತರಿಕೆಯಾಗುತ್ತಿರುವವ ಸಂಖ್ಯೆ ಹೊಸ ಕೇಸ್​ಗೆ ಹೋಲಿಸಿದರೆ ಬಹಳಷ್ಟು ಹೆಚ್ಚೇ ಇದೆ. ದಿನದ ಪಾಸಿಟಿವಿಟಿ ರೇಟ್ 9.07ಕ್ಕೆ ಇಳಿಕೆಯಾಗಿದೆ.

ಅಯೋಧ್ಯೆ ದೇಗುಲಗಳು ಓಪನ್: ಅಯೋಧ್ಯೆಯ ಬಹುತೇಕ ಎಲ್ಲ ದೇವಸ್ಥಾನಗಳು ಮಂಗಳವಾರ ಭಕ್ತರಿಗೆ ತೆರೆದುಕೊಳ್ಳಲಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸಿರುವ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಸೂಚನೆಯನ್ನು ನೀಡಲಾಗಿದೆ. ಲಸಿಕೆ ಹಾಕಿಸಿದವರಷ್ಟೇ ದೇಗುಲಕ್ಕೆ ಬರುವಂತೆಯೂ ಭಕ್ತರಲ್ಲಿ ಸಂತರು ಮನವಿ ಮಾಡಿದ್ದಾರೆ. ಫೇಸ್ ಮಾಸ್ಕ್ ಧರಿಸುವುದು, ಕೈಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net