ಕಳೆದ ಆಧಾರ್ ಉಗ್ರರ ಕೈಗೆ ಸಿಕ್ಕೀತು ಹುಷಾರ್: ನಿರ್ಲಕ್ಷ್ಯ ವಹಿಸದೆ ತಕ್ಷಣ ಪೊಲೀಸ್ ದೂರು ಕೊಡಿ; ಸಾಫ್ಟ್ ಕಾಪಿ ಬಳಕೆ ಉತ್ತಮ..

Alok Kumar
ಮಂಗಳೂರಿನ ನಾಗುರಿ ಆಟೋ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್ ಶಾರೀಕ್ ವಾಸಸ್ಥಳದಿಂದ ವಶಪಡಿಸಿಕೊಳ್ಳಲಾದ ಬಾಂಬ್ ತಯಾರಿ ಸಾಧನಗಳನ್ನು ಪರಿಶೀಲಿಸುತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು.
Published on

ಬೆಂಗಳೂರು: ಆಧಾರ್ ಕಾರ್ಡ್ ಅಥವಾ ಇತರೆ ದಾಖಲಾತಿ ಕಳೆದುಕೊಂಡಾಗ ತಕ್ಷಣ ದೂರು ದಾಖಲಿಸಬೇಕು. ಇಲ್ಲವಾದರೆ ಮುಂದೊಂದು ದಿನ ಅದು ಸಂಕಷ್ಟಕ್ಕೆ ಕಾರಣವಾಗಬಹುದು. ಆಧಾರ್ ಕಾರ್ಡ್ ಕಳೆದುಕೊಂಡಿದ್ದರೂ ದೂರು ನೀಡದೆ ನಿರ್ಲಕ್ಷ್ಯ ವಹಿಸಿದ್ದ ವ್ಯಕ್ತಿಯೊಬ್ಬರು ಮಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಮಸ್ಯೆ ಸಿಲುಕುವಂತಾಗಿದೆ.

ತಪ್ಪದೇ ಎಫ್​ಐಆರ್ ದಾಖಲಿಸಿ: ಮುದ್ರಿತ (ಹಾರ್ಡ್ ಕಾಪಿ ಆಧಾರ್ ಕಾರ್ಡ್) ಕಳೆದು ಹೋದ ಪಕ್ಷದಲ್ಲಿ ಮುಂದೆ ಏನು ಮಾಡಬೇಕು ಎಂಬುದನ್ನು ಮೈ ಗೊವ್ ಎಂಬ (M ಎಣ್ಖ) ಸರ್ಕಾರ್ ಬ್ಲಾಗ್​ನಲ್ಲಿ ಸವಿವರವಾಗಿ ವಿವರಿಸಲಾಗಿದೆ. ಅದರ ಪ್ರಕಾರ, ಆಧಾರ್ ಕಾರ್ಡ್ ಕಳೆದುಕೊಂಡಾಗ ಮೊದಲು ಎಫ್​ಐಆರ್ ದಾಖಲಿಸಬೇಕು. ಬಳಿಕ ನೀವು ಸುಲಭವಾಗಿ ಆನ್​ಲೈನ್ ಮೂಲಕ ಮತ್ತೊಂದು ಆಧಾರ್ ಕಾರ್ಡ್ ಡೌನ್​ಲೋಡ್ ಮಾಡಿಕೊಳ್ಳಬಹುದು.

ಇ-ಲಾಸ್ಟ್​ನಲ್ಲಿ ದೂರು ದಾಖಲಿಸಬಹುದು: ರಾಜ್ಯ ಪೊಲೀಸ್ ಇಲಾಖೆಯು ಇ-ಲಾಸ್ಟ್ ರಿಪೋಟ್ಸ್ ಎಂಬ ಸೌಲಭ್ಯವನ್ನು ಜಾರಿಗೊಳಿಸಿದೆ. ಇದರ ಮೂಲಕ ನಾಗರಿಕರು ಕಳೆದುಹೋದ ತಮ್ಮ ದಾಖಲೆ ಅಥವಾ ವಸ್ತುಗಳ ಬಗ್ಗೆ ಆನ್​ಲೈನ್​ನಲ್ಲಿ ಸುಲಭವಾಗಿ ವಿವರಗಳನ್ನು ದಾಖಲಿಸಬಹುದು. ಇದರಿಂದ ಕಳೆದು ಹೋದ ನಿಮ್ಮ ದಾಖಲೆಗಳು ಸಿಕ್ಕಿದರೆ ಪೊಲೀಸರು ಸಂರ್ಪಸಿ ಮರಳಿಸುತ್ತಾರೆ. ಇದರ ಜತೆಗೆ ನಿಮ್ಮ ದಾಖಲೆ ಕಳೆದುಹೋಗಿರುವುದನ್ನು ಖಾತರಿಪಡಿಸಲು ಇದು ಸೂಕ್ತ ದಾಖಲೆ ಸಿಕ್ಕಿದಂತಾಗುತ್ತದೆ.

ದುರ್ಬಳಕೆ ತಡೆಯುವುದು ಹೇಗೆ?

  • ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿಯ ಆಧಾರ್ ಬಳಸಿ
  • ಡಿಜಿ ಲಾಕರ್​ನಲ್ಲಿ ಆಧಾರ್ ಕಾರ್ಡ್ ಬಳಸಿ
  • ಆಧಾರ್ ಒಟಿಪಿ ಬೇರೆಯವರ ಜತೆ ಹಂಚಿಕೊಳ್ಳದಿರಿ
  • ಇ-ಆಧಾರ್ ಡೌನ್​ಲೋಡ್ ಬಳಿಕ ಫೈಲ್ ಡಿಲೀಟ್ ಮಾಡಿ
  • ಅಧಿಕೃತ ವೆಬ್​ಸೈಟ್​ನಲ್ಲೇ ಇ-ಆಧಾರ್ ಡೌನ್​ಲೋಡ್ ಮಾಡಿ.
  • ಮಾಸ್ಕ್​ಡ್ ಆಧಾರ್ ಮೂಲಕ ನಿಮ್ಮ ಆಧಾರ್ ಸಂಖ್ಯೆ ಬಹಿರಂಗಪಡಿಸದೆ ವ್ಯವಹರಿಸಬಹುದಾಗಿದೆ

ಸ್ಫೋಟ ತನಿಖೆ ಚುರುಕು: ಮಂಗಳೂರಿನಲ್ಲಿ ನಡೆದ ಆಟೋ ರಿಕ್ಷಾ ಸ್ಪೋಟ ಪ್ರಕರಣದ ತನಿಖೆ ಚುರುಕುಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಪ್ರಮುಖ ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ವೈಯಕ್ತಿಕ ಮಾಹಿತಿ ಪಡೆದುಕೊಂಡಿದ್ದಾರೆ. ಅವನ ಸಂಪರ್ಕ ಯಾವ ಯಾವ ಊರಲ್ಲಿದೆ. ಅದನ್ನೂ ಪತ್ತೆ ಮಾಡಲು ಸಜ್ಜಾಗಿದ್ದಾರೆ. ಬೇರೆ ಬೇರೆ ಯಾವ ಕೇಸ್​ನಲ್ಲಿ ಇದ್ದಾನೆ ಎಂದು ಮಾಹಿತಿ ಸಿಕ್ಕಿದೆ. ಆ ಜಾಡು ಹಿಡಿದು ಹಳೇ ಕೇಸ್​ಗಳ ಆಧಾರದ ಮೇಲೆ ಮುಂದಿನ ತನಿಖೆ ನಡೆಯುತ್ತದೆ. ಆತನಿಗೆ ಆರೋಗ್ಯ ತೊಂದರೆಯಾಗಿದೆ. ಗಂಟಲಲ್ಲಿ ಟ್ಯೂಬ್ ಹಾಕಿರುವುದರಿಂದ ಮಾತನಾಡಲು ಆಗುವುದಿಲ್ಲ. ಅವರ ಕುಟುಂಬದವರನ್ನು ಗುರುತಿಸಿರುವುದು ಪ್ರಮುಖ ಬೆಳವಣಿಗೆ. ಇದೆಲ್ಲದರ ಮಾಹಿತಿ ಎನ್​ಐಎಗೆ ಕೊಟ್ಟಿದ್ದೇವೆ ಎಂದರು.

ಚಾಲಕನಿಗೆ ಪರಿಹಾರ: ನಾಗುರಿ ಸ್ಫೋಟ ಪ್ರಕರಣದಲ್ಲಿ ಅಮಾಯಕ ರಿಕ್ಷಾ ಚಾಲಕ ನೋವು ಅನುಭವಿಸುವಂತಾಗಿದೆ ಎಂದು ಹೇಳಿದ ಎಡಿಜಿಪಿ ಅಲೋಕ್ ಕುಮಾರ್, ದುಡಿಯುತ್ತಿದ್ದ ರಿಕ್ಷಾಕ್ಕೆ ಹಾನಿಯಾಗಿದೆ. ಅವರ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರದ ವತಿಯಿಂದ ಅವರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು. ಸುಟ್ಟ ಗಾಯಗೊಂಡಿರುವ ಆರೋಪಿ ಗುಣವಾದ ನಂತರ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು ಎಂದರು.

ಊರೂರು ಸುತ್ತಾಡಿ ಮೈಸೂರಲ್ಲಿ ವಾಸ!: ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು. ಆ ಸಂದರ್ಭ ಈ ಆರೋಪಿ ಎಚ್ಚೆತ್ತುಕೊಂಡು ಊರು ಬಿಟ್ಟು, ಶಿವಮೊಗ್ಗದಿಂದ ಪರಾರಿಯಾಗಿ, ಕೊಯಮತ್ತೂರು, ಕೇರಳ, ಮೈಸೂರು ಮೊದಲಾದ ಕಡೆ ಸುತ್ತಾಡಿ ಮೈಸೂರಿನಲ್ಲಿ ವಾಸವಾಗಿದ್ದುಕೊಂಡು ಮೊಬೈಲ್ ರಿಪೇರಿ ಸಂಸ್ಥೆಯಲ್ಲಿ ತರಗತಿ ಮಾಡಿಕೊಂಡಿದ್ದ ಎಂದು ಎಡಿಜಿಪಿ ಹೇಳಿದ್ದಾರೆ.

ಬಿಗಿ ಪೊಲೀಸ್ ಕಣ್ಗಾವಲು: ಕುಕ್ಕರ್​ಬಾಂಬ್ ಸ್ಪೋಟದಲ್ಲಿ ಮೈಸೂರಿನ ನಂಟು ಇರುವುದು ಬಹಿರಂಗ ಗೊಂಡ ಕಾರಣ ಪೊಲೀಸರು ಹೈ-ಅಲರ್ಟ್ ಆಗಿದ್ದು, ಮೈಸೂರು ನಗರಾದ್ಯಂತ ಬಿಗಿ ತಪಾಸಣೆ ನಡೆಸುತ್ತಿದ್ದಾರೆ. ಬಾಡಿಗೆ ಮನೆ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸವಿರುವ ಬಾಡಿಗೆದಾರರ ದಾಖಲಾತಿಗಳನ್ನು ಮನೆಯ ಮಾಲೀಕರು ಕಟ್ಟುನಿಟ್ಟಿನಿಂದ ಪರಿಶೀಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.

ಟಾರ್ಗೆಟ್ ಸಿಎಂ ಜಸ್ಟ್ ಮಿಸ್!

ಕೆಲವು ಭಯೋತ್ಪಾದನಾ ಸಂಘಟನೆಗಳ ಪ್ರೇರಣೆಯಿಂದ ಆರೋಪಿ ಶಾರೀಕ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿಯ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ. ನ.19ರಂದು ಮಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಈ ನಾಯಕರನ್ನು ಹತ್ಯೆ ಮಾಡುವ ಯೋಜನೆಯನ್ನೂ ರೂಪಿಸಲಾಗಿತ್ತು ಎನ್ನುವುದು ಪೋಲಿಸರ ಮಾಹಿತಿ. ಆದರೆ ಆರೋಪಿ ಮೈಸೂರಿನಲ್ಲಿ ಹೊರಡುವ ಸಂದರ್ಭ ಬಸ್ ಮಿಸ್ ಆಗಿದ್ದರಿಂದ ಆರೋಪಿಗಳ ಟಾರ್ಗೆಟ್ ಸಿಎಂ ಯೋಜನೆ ವಿಫಲವಾಯಿತು. ಮಂಗಳೂರಿಗೆ ತಡವಾಗಿ ಆಗಮಿಸಿದ ಆರೋಪಿ ಜನವಸತಿ ಪ್ರದೇಶಕ್ಕಾಗಿ ಹುಡುಕುತ್ತಿದ್ದು, ಸಿಟಿ ಸೆಂಟರ್ ಅಥವಾ ಕದ್ರಿ ಪಾರ್ಕ್​ಗೆ ತೆರಳಲು ಯೋಜನೆ ರೂಪಿಸಿದ್ದ. ಪಡೀಲ್ ಬಳಿ ಬಸ್ ಇಳಿದು ಪೂರ್ವ ಯೊಜನೆಯಂತೆ ಕುಕ್ಕರ್​ನಲ್ಲಿರಿಸಿದ ಸಾಧಾರಣ ತೀವ್ರತೆಯ ಬಾಂಬನ್ನು ಆಕ್ಟಿವ್ ಗೊಳಿಸಿ ರಿಕ್ಷಾ ಏರಿದ್ದ. ರಸ್ತೆ ಸಮರ್ಪಕವಿಲ್ಲದ ಕಾರಣ ಕುಕ್ಕರ್ ಅದುರಿ ಸ್ಪೋಟಗೊಂಡಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.

ನಾಲ್ವರು ಪೊಲೀಸ್ ವಶಕ್ಕೆ: ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 2022ರ ಸೆಪ್ಟೆಂಬರ್ 19ರಂದು ದಾಖಲಾದ ಕಾನೂನುಬಾಹಿರ ಚಟುವಟಿಕೆ ಪ್ರಕರಣದಲ್ಲಿ ಶಾರೀಕ್ ಒಂದನೇ ಆರೋಪಿ. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡು ಮೈಸೂರಿನಲ್ಲಿ ವಾಸವಾಗಿದ್ದ. ನ. 19ರಂದು ಮೈಸೂರಿನಿಂದ ಹೊರಟು ಮಂಗಳೂರು ಹೊರವಲಯದಲ್ಲಿ ಬಸ್ಸಿನಿಂದ ಇಳಿದು ಆಟೋದಲ್ಲಿ ಪಂಪ್​ವೆಲ್ ಕಡೆಗೆ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಮೈಸೂರಿನಲ್ಲಿ ಇಬ್ಬರು, ಮಂಗಳೂರಿನಲ್ಲಿ ಓರ್ವ ಹಾಗೂ ಊಟಿಯಿಂದ ಓರ್ವನನ್ನು ವಶಕ್ಕೆ ಪಡೆದು ವಿಚಾರಗೊಳಪಡಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಕುಟುಂಬಸ್ಥರಿಂದ ಗುರುತು ಪತ್ತೆ: ಆರೋಪಿಯನ್ನು ಸೋಮವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮಲತಾಯಿ ಶಬಾನಾ, ಸಹೋದರಿ ಆಯಿಷಾ ಹಾಗೂ ತಾಯಿಯ ತಂಗಿ ಯಾಸ್ಮೀನ್ ಆತನನ್ನು ಶಾರೀಕ್ ಎಂದು ಗುರುತಿಸಿದ್ದಾಗಿ ಎಡಿಜಿಪಿ ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಆಧಾರ್ ಕಾರ್ಡ್ ದೊರಕಿದ್ದರೂ, ಅದರಲ್ಲಿ ಹೆಸರು ಮತ್ತು ವಿಳಾಸ ಧಾರವಾಡದ್ದಾಗಿತ್ತ್ತು. ಅಲ್ಲಿನ ಪೊಲೀಸ್ ಅಧಿಕಾರಿಗಳನ್ನು ಸಂರ್ಪಸಿ ಮಾಹಿತಿ ಕಲೆ ಹಾಕಿದಾಗ, ಆ ಕಾರ್ಡ್ ನಕಲಿ ಎಂದೂ, ಅದರಲ್ಲಿದ್ದ ಹೆಸರಿನ ವ್ಯಕ್ತಿ ಆಧಾರ್ ಕಾರ್ಡನ್ನು 6 ತಿಂಗಳ ಹಿಂದೆಯೇ ಕಳೆದುಕೊಂಡಿದ್ದ ಎಂಬ ಮಾಹಿತಿ ಲಭಿಸಿತ್ತು. ಶಾರೀಕ್ ಮೊಬೈಲ್ ಫೋನನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು ಸ್ಪೋಟದ ಹಿಂದೆ ಭಾರಿ ದೊಡ್ಡ ಕಾರಸ್ಥಾನ ಇದೆ. ಮಾಹಿತಿ ಪ್ರಕಾರ ಗಾಯಾಳು ತೀರ್ಥಹಳ್ಳಿ ಮೂಲದ ಶಾರೀಕ್ ಸೂಸೈಡ್ ಬಾಂಬರ್ ಇರಬಹುದು. ತೀವ್ರ ತನಿಖೆಯ ಸ್ಪಷ್ಟ ಚಿತ್ರಣ ಸಿಗಲಿದೆ. | ಆರಗ ಜ್ಞಾನೇಂದ್ರ ಗೃಹ ಸಚಿವ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿದರೆ ಶೂಟೌಟ್ ಮಾಡುತ್ತಾರೆ ಅಥವಾ ಗಲ್ಲಿಗೇರಿಸುತ್ತಾರೆಂಬ ಭಯ ಮೂಡಬೇಕು. ಅಲ್ಲಿವರೆಗೂ ಸಮಾಜ ಸುಧಾರಣೆ ಆಗುವುದಿಲ್ಲ. | ಕೆ.ಎಸ್.ಈಶ್ವರಪ್ಪ ಮಾಜಿ ಸಚಿವ

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ನನ್ನ ಮಗ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಮತೀನ್ ತಾಯಿ ಹೇಳಿದ್ದಾರೆ. ಮಗ ಮೂರು ವರ್ಷದಿಂದ ನಾಪತ್ತೆಯಾಗಿದ್ದಾನೆ. ಎಲ್ಲಿದ್ದಾನೋ ಗೊತ್ತಿಲ್ಲ. ನನ್ನ ಮಗ ತಪ್ಪು ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಆತ ಏನಾದರೂ ತಪ್ಪು ಮಾಡಿದ್ದಲ್ಲಿ ಶಿಕ್ಷೆ ನೀಡಲಿ ಎಂದರು. ಮತೀನ್ ಸುಳಿವು ನೀಡಿದವರಿಗೆ ಈಗಾಗಲೇ ಎನ್​ಐಎ ನಗದು ಬಹುಮಾನ ಘೊಷಣೆ ಮಾಡಿದೆ.

ಸಂಬಂಧಿಗಳ ಮನೆ ಮೇಲೆ ದಾಳಿ

ಶಿವಮೊಗ್ಗ/ ತೀರ್ಥಹಳ್ಳಿ: ಸ್ಪೋಟಕ್ಕೆ ಸಂಬಂಧಪಟ್ಟಂತೆ ಆರೋಪಿ ಶಾರಿಕ್​ನ ತೀರ್ಥಹಳ್ಳಿಯ ಮನೆ, ಅವರ ಅಜ್ಜಿ ಮನೆ ಮತ್ತು ಅವನ ಆಪ್ತರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು ತಪಾಸಣೆ ಮಾಡಿದರು. ಇದೇ ಪ್ರಕರಣದ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಡಿಎಸ್ಪಿ ಶಾಂತವೀರ ನೇತೃತ್ವದ ತಂಡ ಮಂಗಳೂರಿಗೆ ತೆರಳಿದೆ. ಸೋಮವಾರ ನಸುಕಿನಿಂದಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಪಟ್ಟಣದ ಸೊಪ್ಪುಗುಡ್ಡೆ ಬಡಾವಣೆಯ ಮೀನು ಮಾರ್ಕೆಟ್ ಸಮೀಪ ಇರುವ ಆರೋಪಿಯ ಮನೆ ಹಾಗೂ ಹತ್ತಿರದಲ್ಲೇ ಇರುವ ಆತನ ಅಜ್ಜಿಯ ಮನೆ, ಸಮೀಪದ ಬಂಧುಗಳ ಎರಡು ಮನೆಗಳಲ್ಲೂ ಪರಿಶೀಲನೆ ನಡೆಸಿದರು. ತನಿಖೆಯ ಸಂದರ್ಭದಲ್ಲಿ ಯಾವುದೇ ಮಹತ್ವದ ಮಾಹಿತಿ ದೊರೆತ ಬಗ್ಗೆ ತಿಳಿದು ಬಂದಿಲ್ಲ.

ಅನಾಥ ಬ್ಯಾಗ್ ತಂದ ಆತಂಕ!

ಮಂಗಳೂರು: ಮಂಗಳೂರಿನ ಬಿಜೈ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಬ್ಯಾಗ್ ಕಂಡ ಕೆಲವರು ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಮಾಹಿತಿ ನೀಡಿದರು. ಬಾಂಬ್ ಸ್ಕಾ್ವಡ್, ಶ್ವಾನದಳ ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದಾಗ, ಅಪಾಯಕಾರಿ ವಸ್ತು ಕಂಡುಬರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net