ಭಾರತದ ಬೇಡಿಕೆಗೆ ತಲೆಬಾಗಿದ ಪಾಕ್​; ಹೈಬ್ರಿಡ್​ ಮಾದರಿಯಲ್ಲಿ Champions Trophy ನಡೆಸಲು ಒಪ್ಪಿಗೆ ಸೂಚಿಸಲು ಕಾರಣ ಹೀಗಿದೆ

Champions Trophy
Published on

ನವದೆಹಲಿ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ (Champions Trophy) ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಐಸಿಸಿ ತೆರೆ ಎಳೆದಿದ್ದು, ಹೈಬ್ರಿಡ್​ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ವಿಧಿಸಿದ್ದ ಒಂದು ಷರತ್ತಿಗೆ ಐಸಿಸಿ ಒಪ್ಪಿಗೆ ಸೂಚಿಸಿದ್ದು, ಈ ವಿಚಾರವಾಗಿ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ ನಡುವೆ ರಹಸ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ.

2026 ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ (T20 WorldCup) ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಬರುವುದಿಲ್ಲ. ಬದಲಿಗೆ ಪಾಕಿಸ್ತಾನದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ (Hybrid Model) ಆಯೋಜಿಸಲು ಪಿಸಿಬಿ ಬೇಡಿಕೆಯನ್ನು ಇರಿಸಿದ್ದು, ಇದಕ್ಕೆ ಐಸಿಸಿ ಹಾಗೂ ಬಿಸಿಸಿಐ ಒಪ್ಪಿಗೆ ಸೂಚಿಸಿರುವುದಾಗಿ ವರದಿಯಾಗಿದೆ. ಶ್ರೀಲಂಕಾದಲ್ಲಿ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಆಯೋಜಿಸಬೇಕೆಂಡು ಪಿಸಿಬಿ ಷರತ್ತು ವಿಧಿಸಿದೆ. ಇದಲ್ಲದೆ 2027ರ ನಂತರ ನಡೆಯಲ್ಲಿರುವ ಐಸಿಸಿ ಮಹಿಳಾ ಟ್ರೋಫಿಯ ಆತಿಥ್ಯವನ್ನು ನೀಡುವುದಾಗಿ ಐಸಿಸಿ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

Champions Trophy

ಶುಕ್ರವಾರ (ಡಿಸೆಂಬರ್​ 13) ಐಸಿಸಿ ನಡೆಸಿದ ಸಭೆಯಲ್ಲಿ ಹೈಬ್ರಿಡ್ ಮಾದರಿಗೆ (Hybrid Model) ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದ್ದು, ಅದರಂತೆ ಟೀಮ್​ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಒಂದು ವೇಳೆ ಟೀಮ್​ ಇಂಡಿಯಾ ಫೈನಲ್​ ಪ್ರವೇಶಿಸಿದರೂ ಕೂಡ ಆ ಪಂದ್ಯ ಕೂಡ ದುಬೈನಲ್ಲಿ ನಡೆಯಲಿದೆ. ಈ ಮೂಲಕ ಪಿಸಿಬಿ ಭಾರತದ ಬೇಡಿಕೆಗೆ ತಲೆಬಾಗಿದ್ದು, ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ಒಪ್ಪಿಗೆ ಸೂಚಿಸಿದೆ.

2025ರ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್​ ಟ್ರೋಫಿ (Champions Trophy) ನಡೆಯಲಿದ್ದು, ಒಟ್ಟು 08 ತಂಡಗಳು ಇದರಲ್ಲಿ ಭಾಗಿಯಾಗಲಿವೆ. 8 ತಂಡಗಳನ್ನು ತಲಾ 4 ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲಿವೆ. ಸೆಮೀಸ್​ನಲ್ಲಿ ಗೆದ್ದ ತಂಡಗಳ ನಡುವೆ ಫೈನಲ್‌ ಪಂದ್ಯ ನಡೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net