ಟಿ20 ವಿಶ್ವಕಪ್​ ವಿಜೇತ ಭಾರತ ತಂಡಕ್ಕೆ ಬಂಪರ್​ ಬಹುಮಾನ ಘೋಷಿಸಿದ ಬಿಸಿಸಿಐ!

web t20 wc
Published on

ನವದೆಹಲಿ: ಟಿ20 ವಿಶ್ವಕಪ್​ ವಿಜೇತ ಭಾರತ ತಂಡದ ಎಲ್ಲ ಆಟಗಾರರು, ತರಬೇತಿ ಸಿಬ್ಬಂದಿಗೆ ಒಟ್ಟು 125 ಕೋಟಿ ರೂಪಾಯಿ ಬಂಪರ್​ ಬಹುಮಾನವನ್ನು ಬಿಸಿಸಿಐ ಭಾನುವಾರ ಘೋಷಿಸಿದೆ. ಕಾರ್ಯದರ್ಶಿ ಜಯ್​ ಷಾ ಎಕ್ಸ್​ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಇದರೊಂದಿಗೆ ಭಾರತ ತಂಡ ಟೂರ್ನಿಯ 20.4 ಕೋಟಿ ರೂ. ಬಹುಮಾನ ಸೇರಿದಂತೆ ಒಟ್ಟು 145.4 ಕೋಟಿ ರೂ. ಗೆದ್ದಂತಾಗಿದೆ.

ರೋಹಿತ್​ ಪಡೆಗೆ ಮೋದಿ ಭೇಷ್​: ಕೆರಿಬಿಯನ್​ ನೆಲದಲ್ಲಿ ಟಿ20 ವಿಶ್ವಕಪ್​ ಗೆದ್ದು ವಿಜೃಂಭಿಸುವ ಮೂಲಕ 140 ಕೋಟಿ ಭಾರತೀಯರ 11 ವರ್ಷಗಳ ಐಸಿಸಿ ಟ್ರೋಫಿ ಗೆಲುವಿನ ಕನಸು ನನಸಾಗಿಸಿದ ರೋಹಿತ್​ ಶರ್ಮ ಬಳಗಕ್ಕೆ ಮೆಚ್ಚುಗೆ, ಅಭಿನಂದನೆಗಳ ಸುರಿಮಳೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂಚೂಣಿಯಲ್ಲಿ ನಿಂತು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವಕಪ್​ ವಿಜೇತ ತಂಡದ ಆಟಗಾರರು ಮತ್ತು ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಜತೆಗೆ ಭಾನುವಾರ ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿರುವ ಮೋದಿ, ಐತಿಹಾಸಿಕ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಭಾರತ ತಂಡ ಅಹಮದಾಬಾದ್​ನಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಆಸ್ಟ್ರೆಲಿಯಾ ಎದುರು ಸೋತು ನಿರಾಸೆ ಅನುಭವಿಸಿದಾಗ ಡ್ರೆಸ್ಸಿಂಗ್​ ರೂಂಗೆ ತೆರಳಿ ಆಟಗಾರರಿಗೆ ಸಂತ್ವಾನ ಹೇಳಿದ್ದ ಪ್ರಧಾನಿ ಮೋದಿ, ಈ ಬಾರಿ ತಂಡ ಗೆದ್ದಾಗಲೂ ಬೆನ್ನು ತಟ್ಟಿದರು.

ರೋಹಿತ್​ ಶರ್ಮ ನಾಯಕತ್ವವನ್ನು ಪ್ರಶಂಸಿಸಿ, ಟಿ20 ವೃತ್ತೀಜಿವನವನ್ನೂ ಕೊಂಡಾಡಿದರು. ಫೈನಲ್​ನಲ್ಲಿ ವಿರಾಟ್​ ಕೊಹ್ಲಿ ಆಡಿದ ನಿರ್ಣಾಯಕ ಇನಿಂಗ್ಸ್​ ಮತ್ತು ಭಾರತೀಯ ಕ್ರಿಕೆಟ್​ಗೆ ನೀಡಿರುವ ಕೊಡುಗೆಯನ್ನೂ ಹೊಗಳಿದರು. ಫೈನಲ್​ ಪಂದ್ಯದ ಕೊನೇ ಓವರ್​ ಎಸೆದ ಹಾರ್ದಿಕ್​ ಪಾಂಡ್ಯ ಮತ್ತು ಬೌಂಡರಿ ಗೆರೆ ಬಳಿಕ ಅದ್ಭುತ ಕ್ಯಾಚ್​ ಹಿಡಿದ ಸೂರ್ಯಕುಮಾರ್​ ಯಾದವ್​ ಅವರನ್ನೂ ಮೋದಿ ಪ್ರಶಂಸಿಸಿದರು. ನಿರ್ಗಮನ ಕೋಚ್​ ರಾಹುಲ್​ ದ್ರಾವಿಡ್​ ಭಾರತೀಯ ಕ್ರಿಕೆಟ್​ಗೆ ನೀಡಿರುವ ಕೊಡುಗೆಯನ್ನೂ ಮೆಚ್ಚಿದರು. ಬಳಿಕ ಎಕ್ಸ್​ನಲ್ಲಿ ರೋಹಿತ್​, ಕೊಹ್ಲಿ, ದ್ರಾವಿಡ್​ರನ್ನು ಹೊಗಳಿ ಪೋಸ್ಟ್​ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net