ಶ್ರೇಯಸ್​ ಅಯ್ಯರ್​ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ನೀಡಿದ BCCI!

Bbau (88)
Published on

ನವದೆಹಲಿ: ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿಯೆಂದರೆ ಶ್ರೇಯಸ್​ ಅಯ್ಯರ್​ ಆರೋಗ್ಯದ ಬಗ್ಗೆ ಭಾರತೀಯ ಕ್ರಿಕೆಟ್​ ಮಂಡಳಿ (BCCI) ಮಂಗಳವಾರ ಸಿಹಿ ಸುದ್ದಿಯೊಂದನ್ನು ನೀಡಿದೆ.

ಹೌದು, ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅಧಿಕೃತ ಮಾಹಿತಿ ನೀಡಿದ್ದು, ''ಶ್ರೇಯಸ್ ಅಯ್ಯರ್ ವೈದ್ಯರು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಚೇತರಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.

ನಾನು ಡಾ. ರಿಜ್ವಾನ್ ಖಾನ್, (ಸಿಡ್ನಿ ಆಸ್ಪತ್ರೆಯಲ್ಲಿ ಅಯ್ಯರ್ ಅವರ ಚಿಕಿತ್ಸೆಗೆ ಸಹಾಯ ಮಾಡಲು ಅವರೊಂದಿಗೆ ಉಳಿದಿದ್ದ ಭಾರತೀಯ ತಂಡದ ವೈದ್ಯ) ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ. ಸಾಮಾನ್ಯವಾಗಿ, ಅವರು ಆರರಿಂದ ಎಂಟು ವಾರಗಳನ್ನು ತೆಗೆದುಕೊಳ್ಳುತ್ತಾರೆ (ಸಂಪೂರ್ಣವಾಗಿ ಚೇತರಿಸಿಕೊಳ್ಳಲು). ಆದರೆ, ನೀವು ಅವರಿಂದ ಆಶ್ಚರ್ಯವನ್ನು ನಿರೀಕ್ಷಿಸಬಹುದು. ಏಕೆಂದರೆ ಅವರು ಬಹಳ ಬೇಗ ಚೇತರಿಸಿಕೊಳ್ಳಬಹುದು ಎಂದು ಸೈಕಿಯಾ ತಿಳಿಸಿದರು.

ಅಯ್ಯರ್ ಗಾಯಗೊಂಡಿದ್ದು ಹೇಗೆ?

ಸಿಡ್ನಿಯಲ್ಲಿ ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿಯುವಾಗ ಶ್ರೇಯಸ್ ಅಯ್ಯರ್ ಅವರ ಎಡ ಪಕ್ಕೆಲುಬಿಗೆ ಚೆಂಡು ಬಲವಾಗಿ ತಗುಲಿತು. ಈ ವೇಳೆ ಅಯ್ಯರ್​ ಅವರು ತೀವ್ರ ನೋವಿನಿಂದ ನರಳಾಡಿ ಮೈದಾನವನ್ನು ತೊರೆದರು. ಆರಂಭದಲ್ಲಿ ಅವರಿಗಾಗಿರುವ ಗಾಯ ಚಿಕ್ಕದು ಎಂದು ಎಲ್ಲರೂ ಭಾವಿಸಿದರು. ಆದರೆ, ಡ್ರೆಸ್ಸಿಂಗ್ ರೂಮ್​ಗೆ ಹೋದ ಅಯ್ಯರ್ ಶೀಘ್ರದಲ್ಲೇ ಮೂರ್ಛೆ ಹೋದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಸ್ಕ್ಯಾನಿಂಗ್ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಸ್ಕ್ಯಾನ್‌ನಲ್ಲಿ ಆಂತರಿಕ ರಕ್ತಸ್ರಾವವಾಗಿರುವುದು ಕಂಡುಬಂತು. ತಕ್ಷಣ ಅವರನ್ನು ಐಸಿಯುಗೆ ದಾಖಲಿಸಲಾಯಿತು ಮತ್ತು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net