ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಕೋರ್ಸ್

web 2
Published on

ಧಾರವಾಡ: ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಬಿಸಿಎ ಕೋರ್ಸ್ ಆರಂಭಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಹಲವು ವರ್ಷಗಳಿಂದ ವಿದ್ಯಾರ್ಥಿಗಳು- ಪಾಲಕರ ಬೇಡಿಕೆಗೆ ಸ್ಪಂದಿಸಿದ ಶಾಸಕ ವಿನಯ ಕುಲಕರ್ಣಿ ಅವರ ಪ್ರಯತ್ನಕ್ಕೆ ಪಲ ಸಿಕ್ಕಂತಾಗಿದೆ.
ಇಲ್ಲಿನ ಕುಮಾರೇಶ್ವರನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎಸ್.ಸಿ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಐಚ್ಛಿಕ ವಿಷಯವಿತ್ತು. ಇದರ ಜೊತೆಗೆ ಬಿಸಿಎ ಪದವಿ ಕೋರ್ಸ್ ಆರಂಭಕ್ಕೆ ವರ್ಷಗಳಿಂದ ವಿದ್ಯಾರ್ಥಿಗಳು, ಪಾಲಕರ ಬೇಡಿಕೆ ಇತ್ತು. ವಿಶ್ವವಿದ್ಯಾಲಯದ ಅಧೀನದ ಕರ್ನಾಟಕ ಕಾಲೇಜು ಹೊರತುಪಡಿಸಿದರೆ ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಬಿಸಿಎ ಕೋರ್ಸ್ ಇದೆ. ಬಡ ಹಾಗೂ ಮಧ್ಯಮ ವರ್ಗದ ಪಾಲಕರಿಗೆ ಖಾಸಗಿ ಕಾಲೇಜುಗಳ ಶುಲ್ಕ ಭರಿಸುವುದು ಹೊರೆಯಾಗುತ್ತಿತ್ತು. ಹೀಗಾಗಿ ಸರ್ಕಾರಿ ಕಾಲೇಜು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ಈ ಭಾಗದ ಜನ ಶಾಸಕ ವಿನಯ ಕುಲಕರ್ಣಿ ಅವರಿಗೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ವಿನಯ ಕುಲಕರ್ಣಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದರು. ಬಿಸಿಎ ಕೋರ್ಸ್ ಆರಂಭಿಸುವ ಅಗತ್ಯತೆಯನ್ನು ವಿವರಿಸಿದ್ದರು. ಅವರ ಪ್ರಯತ್ನಕ್ಕೆ ಪಲ ಸಿಕ್ಕಿದ್ದು, ಸರ್ಕಾರಿ ಕಾಲೇಜಿನಲ್ಲಿ ಈ ವರ್ಷದಿಂದ ಜಾರಿಗೆ ಬರುವಂತೆ ಬಿಸಿಎ ಕೋರ್ಸ್ ಆರಂಭಿಸಲು ಅವಕಾಶ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net