BBKS10: ಸ್ಪಷ್ಟವಾದ ಕನ್ನಡದಲ್ಲೇ ಪತ್ರ ಓದಿದ ಮೈಕಲ್​; ಈಗ ಹೇಳಿ ಮಣ್ಣಿನ ಮಗ ಯಾರು?

Untitled design (76)
Published on

ಬೆಂಗಳೂರು: ಇಬ್ಬರು ವೈಲ್ಡ್​​ಕಾರ್ಡ್​ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಇದೀಗ ಬಿಗ್‌ಬಾಸ್‌ ಮನೆಯೊಳಗೆ ಟಾಸ್ಕ್​ಗಳು ಕೂಡ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಈ ಮಧ್ಯೆ ಸದಸ್ಯರಿಗೆ ಬಿಗ್​ ಬಾಸ್​ ರಸಪ್ರಶ್ನೆ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದಾರೆ. ಇದೊಂದು ರೀತಿ ಸಿಹಿ ತಿಂದು ಎದುರಾಳಿಗೆ ಪ್ರಶ್ನೆ ಕೇಳುವ ಟಾಸ್ಕ್ ಆಗಿದ್ದು, ಈ ಚುಟವಟಿಕೆಯಲ್ಲಿ ಬರೆದಿರುವ ಕನ್ನಡ ಪದಗಳನ್ನು ಸ್ಪಷ್ಟವಾಗಿ ಓದಿದ ಮೈಕಲ್​ಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್ ಮನೆಗೆ ಪವಿ ಪೂವಪ್ಪ ಮತ್ತು ಅವಿನಾಶ್‌ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸದೊಂದು ಅಲೆಯೇ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲವನ್ನು ತಪ್ಪಿಸುತ್ತಿದೆ. ಟಾಸ್ಕ್‌ಗಳನ್ನು ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್‌ ಟಾಸ್ಕ್‌ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್‌ಗಳು ಎದುರಾಗುತ್ತಿವೆ. ಇಂಥದೊಂದು ಟಾಸ್ಕ್‌ನ ಝಲಕ್ ಇಂದಿನ ಪ್ರೋಮೋದಲ್ಲಿ ಅನಾವರಣಗೊಂಡಿದೆ.

ಮೊದಲಿಗೆ ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್‌ ಅನ್ನು ಸವಿದಿದ್ದು, ಯಾರು ಮೊದಲು ತಿಂದು ತಮ್ಮ ತಲೆಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಮಾತ್ರ ಪ್ರಶ್ನೆಯನ್ನು ಕೇಳುವ ಅಧಿಕಾರ ಸಿಗುತ್ತದೆ. ಈ ಆಟದಲ್ಲಿ ಮೈಕಲ್ ಮೊದಲು ತಿಂದು ತಲೆಮೇಲಿನ ಗಂಟೆ ಬಾರಿಸಿದ್ದಾರೆ. ಅವರ ಪ್ರಥಮ ಪ್ರಶ್ನೆ ಹೀಗಿತ್ತು: ‘ಯಾರ ಜನ್ಮದಿನವನ್ನು ಮಕ್ಕಳ ಜನ್ಮದಿನಾಚರಣೆಯನ್ನಾಗಿ ಆಚರಿಸುತ್ತಾರೆ?’ ಇಷ್ಟು ಸುಲಭದ ಪ್ರಶ್ನೆಗೆ ಅಷ್ಟೇ ಉತ್ಸಾಹದಿಂದ ಎದ್ದುನಿಂತ ಅವಿನಾಶ್‌ ಶೆಟ್ಟಿ, ನವೆಂಬರ್ 14 ಎಂದು ಕಿರುಚಿದ್ದಾರೆ. ಆದ್ರೆ, ಅದು ತಪ್ಪಾಗಿದೆ.

ಇನ್ನು ಎರಡನೇ ಪ್ರಶ್ನೆ ಇನ್ನೂ ಸುಲಭವಾಗಿತ್ತು. ‘ಕನ್ನಡ ವರ್ಣಮಾಲೆಯಲ್ಲಿ ಒಟ್ಟೂ ಎಷ್ಟು ಅಕ್ಷರಗಳಿವೆ?’ ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಯಾರಾದರೂ ಉತ್ತರಿಸಿದ್ರಾ? ಆ ಉತ್ತರ ಸರಿಯಾಗಿತ್ತಾ? ಯಾವೆಲ್ಲಾ ಪ್ರಶ್ನೆಗಳನ್ನು ಕೇಳಲಾಯಿತು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ. ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net