BBKS10: ಪ್ರತಾಪ್ ಮಾಡಿದ ಮುದ್ದೆ ತಿಂದ ಮನೆಮಂದಿ; ಮುಂದೆ ಆಗಿದ್ದು ಎಡವಟ್ಟು!

ವಿಜಯವಾಣಿ (56)
Published on

ಬೆಂಗಳೂರು: ಈ ಇಡೀ ವಾರ ಬಿಗ್‌ಬಾಸ್ ಮನೆಯ ಸದಸ್ಯರೆಲ್ಲರೂ ಶಾಲೆಯಲ್ಲಿ ಮಕ್ಕಳಾಗಿ ಕುಣಿದು-ಕುಪ್ಪಳಿಸಿ, ತಮ್ಮ ಬಾಲ್ಯವನ್ನು ಒಮ್ಮೆ ಮೆಲುಕು ಹಾಕಿದರು. ಈ ಮಧ್ಯೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ಯಾವುದೇ ಜಗಳಗಳಿಲ್ಲದೆ, ಅನಾಹುತಗಳಿಲ್ಲದೆ ಆರಾಮದಾಯಕವಾಗಿ ಕಳೆಯಿತು.

ಇನ್ನೇನು ಇದೇ ರೀತಿ ಈ ವಾರ ಸುಖಾಂತ್ಯವನ್ನು ಕಾಣಲಿದೆ ಎಂದು ಹೇಳುವಷ್ಟರೊಳಗೆ ಬಿಗ್‌ಬಾಸ್‌ ಮನೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ‘ಆಲ್ರೆಡಿ ಅವ್ರೆಲ್ಲ ರಾಕ್ಷಸರಾಗ್ತಿದಾರೆ’ ಎಂದು ತುಕಾಲಿ ಸಂತೋಷ್‌ ಕಳವಳದಿಂದ ಕ್ಯಾಮೆರಾ ಎದುರು ನಿಂತು ಅಲವತ್ತುಕೊಳ್ಳುತ್ತಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಎಂಬ ಗೊಂದಲ ಇದೀಗ ವೀಕ್ಷಕರಲ್ಲಿ ಕಾಡುತ್ತಿದೆ.

ರಾಗಿ ಹಿಟ್ಟನ್ನು ನೋಡಿ, ಪ್ರತಾಪ್‌ಗೆ ಯಾಕೋ ಮುದ್ದೆ ತಿನ್ನುವ ಮನಸ್ಸಾಗಿದೆ. ‘ಯಾರಿಗೆಲ್ಲ ಮುದ್ದೆ ಬೇಕು?’ ಎಂದು ಮನೆಯ ಸದಸ್ಯರನ್ನು ಒಂದು ಬಾರಿ ಕೇಳಿದರು. ಕಾರ್ತಿಕ್‌, ‘ತಿಂತೀನಿ ಕಣೋ ಮಾಡೋ’ ಎಂದು ಪ್ರೋತ್ಸಾಹ ಕೊಟ್ಟಿದ್ದಾರೆ. ತುಕಾಲಿ ಅವರೂ, ‘ಮಾಡೋದ್ ಮಾಡ್ತಿದೀಯಾ. ಸ್ವಲ್ಪ ದಪ್ಪ ಮಾಡೋ’ ಎಂದು ಕೇಳಿದರು. ಪ್ರತಾಪ್ ಈ ಉತ್ಸಾಹದಿಂದಲೇ ಎಲ್ಲರಿಗೂ ಮುದ್ದೆ ಮಾಡಿ ಬಡಿಸಿದ್ದಾರೆ. ಎಲ್ಲರೂ ಖುಷಿಯಿಂದ ತಿಂದಿದ್ದಾರೆ ಕೂಡ. ಆದ್ರೆ, ಇದಾದ ಮೇಲೆ ನಡೆದಿರುವುದು ಎಡವಟ್ಟು!

ಈ ಎಲ್ಲದರ ಮಧ್ಯೆ ಎಲ್ಲೋ ಒಂದು ಕಡೆ ತಾಳ ತಪ್ಪಿದೆ. ಮನೆಯ ಗ್ಯಾಸ್‌ ಆನ್ ಆಗ್ತಿಲ್ಲ. ‘ಮಾಡಿರೋ ಜವಾಬ್ದಾರಿ ನಾನು ಹೊತ್ಕೋತೀನಿ’ ಎಂದು ಪ್ರತಾಪ್ ಹೇಳಿದ್ರೂ ಕೇಳದ ನಮ್ರತಾ, ‘ಮನೆಗೆ ಶಿಕ್ಷೆಯಾದ್ರೆ ನೀನೇನ್ ಮಾಡ್ತೀಯಾ?’ ಎಂದು ಕೇಳಿದ್ದಾರೆ. ಪ್ರತಾಪ್ ಕ್ಯಾಮೆರಾ ಎದುರಿಗೆ ಹೋಗಿ, ‘ಬಿಗ್‌ಬಾಸ್ ದಯವಿಟ್ಟು ಕೊಟ್ಬಿಡಿ ಬಿಗ್‌ಬಾಸ್’ ಎಂದು ಮನವಿ ಮಾಡಿದ್ದಾರೆ. ಅತ್ತ ವಿನಯ್‌ ಕೋಪದಿಂದ, ‘ಈಗ ಊಟ ಬರಬೇಕು ಅಷ್ಟೆ. ರಾತ್ರಿ ಊಟ ಆಗ್ಲಿಲ್ಲ ಅಂದ್ರೆ ದೇವ್ರಾಣೆ ನಾನ್ ಸುಮ್ಮನೆ ಇರಲ್ಲ’ ಎಂದು ಅವಾಜ್ ಹಾಕಿದ್ದಾರೆ.

ಹಾಗಾದ್ರೆ ಅಸಲಿಯಾಗಿ ಮನೆಯೊಳಗೆ ನಡೆದಿದ್ದೇನು? ರಾಗಿ ಮುದ್ದೆ ಮಾಡಿದ್ದೇ ತಪ್ಪಾಯ್ತ? ಅಥವಾ ಮುದ್ದೆ ಮಾಡುವ ಹಂತದಲ್ಲಿ ಏನಾದರೂ ಪ್ರಮಾದವಾಗಿದೆಯಾ? ಮನೆಮಂದಿ ಉಪವಾಸದಲ್ಲಿಯೇ ಮಲಗಬೇಕಾಯ್ತಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net