

ಬೆಂಗಳೂರು: ಕರೊನಾ ಭಯದ ನಡುವೆಯೂ ಅದ್ಧೂರಿಯಾಗಿಯೇ ಆರಂಭವಾದ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್-8 ಯಶಸ್ವಿ ಮೂರು ವಾರಗಳನ್ನು ಪೂರೈಸಿದೆ. ಹೊಸ ಹೊಸ ಟಾಸ್ಕ್ಗಳು ಶೋ ಮೇಲಿನ ಹಿಡಿತ ಮತ್ತು ಆಸಕ್ತಿಯ್ನನು ದುಪ್ಪಟ್ಟಾಗಿಸಿದೆ. 3ನೇ ವಾರದಲ್ಲೂ ಎಲಿಮಿನೇಶನ್ ವಿಚಾರದಲ್ಲಿ ಅನೇಕ ತಿರುವುಗಳನ್ನು ಕಂಡಿದ್ದು, ಈ ವಾರ ಮನೆಯಿಂದ ಖ್ಯಾತ ಧಾರಾವಾಹಿ ನಟಿ ಗೀತಾ ಭಾರತಿ ಭಟ್ ಹೊರಬಿದ್ದಿದ್ದಾರೆ.
ನಿಧಿ ಸುಬ್ಬಯ್ಯ, ವಿಶ್ವನಾಥ್ ಹಾವೇರಿ, ಶಮಂತ್ (ಬ್ರೋ ಗೌಡ), ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಅರವಿಂದ್ ಕೆ.ಪಿ. ಮತ್ತು ಪ್ರಶಾಂತ್ ಸಂಬರಗಿ ಜತೆ ಗೀತಾ ಸಹ ನಾಮಿನೇಟ್ ಆಗಿದ್ದರು. ಆದರೆ, ಅತಿ ಕಡಿಮೆ ವೋಟ್ ಪಡೆದು ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಒಟ್ಟು 22 ದಿನಗಳನ್ನು ಕಳೆದ ಗೀತಾ, ಬಿಗ್ಬಾಸ್ ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದು, ಆಕೆಯ ವಿಭಿನ್ನ ಛಾಯೆಗಳ ಬಗ್ಗೆ ಸ್ಪರ್ಧಿಗಳು ಆಡಿದ ಮಾತಗಳನ್ನು ಸ್ವೀಕರಿಸಿದ್ದಾರೆ, ಹಾಗೆಯೇ ನಿರಾಕರಿಸಿದ್ದಾರೆ ಕೂಡ. ಇದೀಗ ಗೀತಾ ತಮ್ಮ ಬಿಗ್ಬಾಸ್ ಪ್ರಯಾಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಣ್ಣ ಅಸಮಾಧಾನದ ಜತೆ ಹೆಮ್ಮೆಯು ಇದೆ
ಕೇವಲ ಮೂರೇ ವಾರಕ್ಕೆ ಎಲಿಮಿನೇಟ್ ಆದೆ ಎಂಬ ಅಸಮಾಧಾನ ಇದೆ. ಆದರೆ, ಬಿಗ್ಬಾಸ್ ಪ್ರಯಾಣದಲ್ಲಿ ಮೂರು ವಾರ ಜತೆಯಾಗಿದ್ದಕ್ಕೆ ಹೆಮ್ಮೆಯು ಇದೆ. ನನ್ನಂತಹ ವ್ಯಕ್ತಿಯು ಸಹ 22 ದಿನಗಳವರೆಗೆ ಬಿಗ್ಬಾಸ್ನಲ್ಲಿ ಇರಬಹುದೆಂದು ನಾನು ಸಂತೋಷ ಪಡುತ್ತೇನೆಂದರು.
ಬಹಿರಂಗವಾಗಿ ಮಾತನಾಡುವ ಸ್ವಭಾವದವಳಲ್ಲ
ನಾನು ಬಹಿರಂಗವಾಗಿ ಮಾತನಾಡುವ ಸ್ವಭಾವದವಳಲ್ಲ. ಜನರೊಂದಿಗೆ ನಾನು ಸಾರಾಸಗಟಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಬಹುಶಃ ನನ್ನ ಎಲಿಮಿನೇಶನ್ ಮೇಲೆ ಇದು ಪರಿಣಾಮ ಬೀರಿರಬಹುದು. ನನ್ನ ಆಲೋಚನೆಗಳನ್ನು ಇತರರಿಗೆ ನಾನು ಸ್ಪಷ್ಟವಾಗಿ ಹೇಳಬಹುದೆಂದು ಭಾವಿಸುತ್ತೇನೆ. ಆದರೆ, ಯಾವುದೇ ಸಂದೇಹವಿಲ್ಲದೆ ನಾನಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಗೀತಾರಂತೆಯೇ ಬಿಗ್ಬಾಸ್ ಮನೆಯಲ್ಲಿ ಹೆಚ್ಚು ಮಾತನಾಡದ ವೈಷ್ಣವಿ ಗೌಡ ಹೇಗೋ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗೀತಾ, ವೈಷ್ಣವಿಯು ಮನೆಯೊಳಗಿನ ಎಲ್ಲ ಸ್ಪರ್ಧಿಗಳೊಂದಿಗೆ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರು ಎಲ್ಲರ ಬಳಿ ಹೋಗಿ ಮಾತನಾಡುತ್ತಾರೆ ಮತ್ತು ಅವರ ಯೋಗ ಕೂಡ ಸಹಕಾರಿಯಾಗಿದೆ ಎಂದರು. ಆದರೆ, ನಾನು ಮತ್ತೊಬ್ಬರೊಂದಿಗೆ ಮಾತನಾಡಲು ಹಿಂಜರಿಯುತ್ತಿದ್ದೆ ಮತ್ತು ಇನ್ನೊಬ್ಬರ ಜತೆ ಮಾತನಾಡಲು ನಾನೆಂದು ಪ್ರಯತ್ನ ಮಾಡಲಿಲ್ಲ. ಹೀಗಾಗಿ ಈ ಸ್ವಭಾವ ನನ್ನ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.