

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಅಸ್ತ್ರಗಳು ಬಳಕೆಯಾಗುತ್ತವೆ. ಅದರಲ್ಲಿ ಬ್ರಹ್ಮಾಸ್ತ್ರವು ಸೇರಿದ್ದು, ಯಾವ ಭಾಗಕ್ಕೆ ಯಾವ ಅಸ್ತ್ರ ಬಳಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೋರ್ಚಾಗಳ ಸಮಾವೇಶದ ರಾಜ್ಯ ಸಂಚಾಲಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋರ್ಚಾಗಳ ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ಕಳುಹಿಸಲಿದ್ದು, ಅದು ಹಿಂದುತ್ತ ಅಥವಾ ಅಭಿವೃದ್ಧಿ ಮುಂದಿನ ಚುನಾವಣಾ ಅಜೆಂಡಾ ಆಗಿರಲಿದೆಯೆ ? ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದು, ಯಾವ ಭಾಗಕ್ಕೆ ಏನು ಬೇಕೋ ಆ ಅಸ್ತ್ರಬಳಸಲಿದ್ದಾರೆ ಎಂದರು.
ಮಂಡ್ಯದಲ್ಲಿ ಸಮಾವೇಶ
ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲೆಂದು ಮೋರ್ಚಾಗಳ ಸಮಾವೇಶ ಸಂಘಟಿಸುತ್ತಿದ್ದು, ಮಂಡ್ಯದಲ್ಲಿ ಫೆ.20ರಂದು ಯುವ ಮೋರ್ಚಾ ಸಮಾವೇಶದೊಂದಿಗೆ ಆರಂಭವಾಗಲಿದೆ. ಜಿಲ್ಲೆಯ ಎಲ್ಲ ಯುವ ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಕೇಂದ್ರ ನಾಯಕರಿಗೂ ಆಹ್ವಾನ ನೀಡಲಾಗಿದೆ.
ಮಾರ್ಚ್ 15 ಎಲ್ಲ ಮೋರ್ಚಾಗಳ ಸಮಾವೇಶ ಪೂರ್ಣಗೊಳಿಸುವ ಗುರಿಯಿದೆ. ರಾಜ್ಯದ 224 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಳ್ಳಲಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.