

ಹನ್ನೆರಡನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಚಳವಳಿಯನ್ನು ಸಂಘಟಿಸಿದ್ದ ಬಸವಣ್ಣನವರು ಜಗತ್ತು ಕಂಡ ದಾರ್ಶನಿಕರಲ್ಲಿ ಒಬ್ಬರು. ಮೂಢನಂಬಿಕೆ, ಅಸ್ಪೃಶ್ಯತೆ ಮುಂತಾದ ಪಿಡುಗುಗಳ ನಿಮೂಲನೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ಅವರು ತಮ್ಮ ವಚನಗಳ ಮೂಲಕ ಕಾಯಕ, ಸಮಾನತೆಯ ಮಹತ್ವವನ್ನು ಸಾರಿದವರು. ಅವರ ಜೀವನ-ಬೋಧನೆಗಳು ಹೇಗೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂಬುದನ್ನು ನಾಡಿನ ಅನೇಕ ಮಠಾಧೀಶರು, ಗಣ್ಯರು ‘ಬಸವ ಜಯಂತಿ’ಯ ಈ ಶುಭ ಸಂದರ್ಭದಲ್ಲಿ ವಿವರಿಸಿದ್ದಾರೆ.
ಕಾಯಕನಿಷ್ಠೆಯಿಂದ ಯಶಸ್ಸು ಖಚಿತ
850 ವರ್ಷಗಳ ಹಿಂದೆಯೇ ಸಂಸತ್ತಿನ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಬಸವಣ್ಣನವರು ಆ ಕಾಲದ ಓರ್ವ ಪ್ರಬುದ್ಧ ರಾಜಕಾರಣಿಯಾಗಿದ್ದರು. ಜಾತಿಭೇದ, ಲಿಂಗಭೇದವನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ವ್ಯಕ್ತಿ ಅವರು. ಆಗ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಮೂಢನಂಬಿಕೆ, ಕಂದಾಚಾರ, ವರ್ಗ ತಾರತಮ್ಯದಂತಹ ಪಿಡುಗುಗಳನ್ನು ಬೇರು ಸಮೇತ ಕಿತ್ತೆಸೆಯಲು ಶ್ರಮಿಸಿದವರು. ಅದಕ್ಕಾಗಿ ಎಲ್ಲ ಜಾತಿ ಜನಾಂಗದವರನ್ನು ಒಳಗೊಂಡ ಸಮಾನಮನಸ್ಕ ಶರಣರ ಪಡೆಯನ್ನೇ ಕಟ್ಟಿದ್ದರು. ಆ ಕಾಲದಲ್ಲೇ ಅಂತರ್ಜಾತಿ ಮದುವೆಗಳನ್ನು ಮಾಡುವ ಮೂಲಕ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟಿದ್ದರು. ‘ಕಾಯಕವೇ ಕೈಲಾಸ’ ಎಂಬ ಅವರ ಬೋಧನೆ ಇಂದಿಗೂ, ಎಂದೆಂದಿಗೂ ಪ್ರಸ್ತುತ. ‘ಕೆಲಸ ಯಾವುದೇ ಇದ್ದರೂ ನಿಷ್ಠೆಯಿಂದ ಮಾಡುತ್ತ ಹೋದರೆ ಬದುಕಿನಲ್ಲಿ ಯಶಸ್ಸು ಖಚಿತ’ ಎಂಬ ಅವರ ಆಶಯ ಒಂದು ಸಾರ್ವಕಾಲಿಕ ಸತ್ಯ. ಎಂಟು ಶತಮಾನಗಳ ಹಿಂದೆಯೇ ಅತ್ಯಂತ ಸರಳ ಕನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಅವರು ರಚಿಸಿದ ವಚನಗಳು ಈಗಲೂ ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಇನ್ನೂ ನೂರಾರು, ಸಾವಿರಾರು ವರ್ಷ ಕಳೆದರೂ ಅವು ಮನುಕುಲಕ್ಕೆ ಮಾರ್ಗದರ್ಶನ ಮಾಡುತ್ತಲೇ ಇರುತ್ತವೆ. ನಾವು ನಮ್ಮ ಎಲ್ಲ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿರುವ ತತ್ವಾದರ್ಶಗಳಲ್ಲಿ ಬಸವಣ್ಣನವರ ಕಾಯಕ ನೀತಿಯೂ ಒಂದು ಮಹತ್ವದ ಅಂಶವಾಗಿದೆ.
| ಡಾ. ವಿಜಯ ಸಂಕೇಶ್ವರ ಚೇರ್ಮನ್, ವಿಆರ್ಎಲ್ ಸಮೂಹ ಸಂಸ್ಥೆ