ಅಮ್ಮನಾಗುತ್ತಿದ್ದಾರೆ ಟೆನಿಸ್ ತಾರೆ ಬಾರ್ತೋಲಿ

Marion Bartoli_web-1
Published on

ಪ್ಯಾರಿಸ್: 2013ರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಮರಿಯನ್ ಬಾರ್ತೋಲಿ ಅಮ್ಮನಾಗುತ್ತಿದ್ದಾರೆ. ಬೆಲ್ಜಿಯಂ ಫುಟ್‌ಬಾಲ್ ಆಟಗಾರ ಯಾಹ್ಯಾ ಬೌಮೆಡಿನ್‌ರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ವರಿಸಿದ್ದ ಫ್ರಾನ್ಸ್​ ಟೆನಿಸ್ ತಾರೆ ಬಾರ್ತೋಲಿ ಮೊದಲ ಬಾರಿ ಗರ್ಭಿಣಿಯಾಗಿರುವ ವಿಷಯವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

‘ನಾವಿಬ್ಬರೂ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬುದನ್ನು ತಿಳಿಸಲು ಅಪಾರ ಖುಷಿಯಾಗುತ್ತಿದೆ’ ಎಂದು 35 ವರ್ಷದ ಬಾರ್ತೋಲಿ ಪತಿಯ ಜತೆಗೆ ಮಾಸ್ಕ್ ಧರಿಸಿ ನಿಂತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ. 2011ರ ಫ್ರೆಂಚ್​ ಓಪನ್‌ನಲ್ಲಿ ರನ್ನರ್‌ಅಪ್ ಆಗಿದ್ದ ಬಾರ್ತೋಲಿ, 2007ರ ವಿಂಬಲ್ಡನ್‌ನಲ್ಲಿ ರನ್ನರ್‌ಅಪ್ ಕೂಡ ಆಗಿದ್ದರು.

2013ರಲ್ಲಿ ವಿಂಬಲ್ಡನ್ ಗೆದ್ದ ಬೆನ್ನಲ್ಲೇ ನಿವೃತ್ತಿ ಪ್ರಕಟಿಸುವ ಮೂಲಕ ಬಾರ್ತೋಲಿ ಟೆನಿಸ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಆಗ ಅವರು ವಿಶ್ವ ರ‌್ಯಾಂಕಿಂಗ್‌ನಲ್ಲಿ 7ನೇ ಸ್ಥಾನದಲ್ಲಿದ್ದರು. ಬಳಿಕ ಅವರು 2017ರ ಫ್ರೆಂಚ್​ ಓಪನ್ ಚಾಂಪಿಯನ್ ಜೆಲೆನಾ ಒಸ್ತಾಪೆಂಕೊಗೆ ತರಬೇತಿಯನ್ನೂ ನೀಡಿದ್ದರು. ನಂತರದಲ್ಲಿ ವೀಕ್ಷಕವಿವರಣೆಯನ್ನೂ ನೀಡಿದ್ದರು. ಆಡುವ ದಿನಗಳಲ್ಲಿ ಸದೃಢವಾಗಿದ್ದ ಅವರು 2016ರಲ್ಲಿ ಅಪರಿಚಿತ ವೈರಸ್ ಕಾಟದಿಂದಾಗಿ ಕೃಷವಾಗಿದ್ದರು ಮತ್ತು ಸಾವಿನ ಭೀತಿಯನ್ನೂ ಎದುರಿಸಿದ್ದರು. ಅದರಿಂದ ಚೇತರಿಸಿಕೊಂಡ ಬಳಿಕ 2018ರಲ್ಲಿ ಮತ್ತೆ ವೃತ್ತಿಪರ ಟೆನಿಸ್‌ಗೆ ಮರಳುವ ಪ್ರಯತ್ನ ನಡೆಸಿದ್ದರು. ಆದರೆ ಅದು ಕೈಗೂಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net